ಸಿನಿಮಾ ಸುದ್ದಿ

50 ರೂಪಾಯಿಯಿಂದ 100 ಕೋಟಿ ಸಂಭಾವನೆವರೆಗೆ: ರಂಗಭೂಮಿಯಿಂದ ಪ್ಯಾನ್ ವರ್ಲ್ಡ್ ಸ್ಟಾರ್ ಆದ ಯಶ್ ಕಥೆ

Share It

ರಾಕಿಂಗ್ ಸ್ಟಾರ್ ಯಶ್ ಇಂದು ಕನ್ನಡ ಮಾತ್ರವಲ್ಲ, ದೇಶದಾಚೆಯೂ ಗುರುತಿಸಿಕೊಂಡಿರುವ ದೊಡ್ಡ ಹೆಸರು. ‘ಕೆಜಿಎಫ್’ ಸರಣಿಯ ಯಶಸ್ಸಿನ ಬಳಿಕ ‘ಟ್ಯಾಕ್ಸಿಕ್’ ಸಿನಿಮಾದ ಮೂಲಕ ಪ್ಯಾನ್ ವರ್ಲ್ಡ್ ಮಟ್ಟಕ್ಕೆ ಕಾಲಿಡುತ್ತಿರುವ ಅವರು, ಕನ್ನಡ ಚಿತ್ರರಂಗವನ್ನು ಜಾಗತಿಕ ವೇದಿಕೆಗೆ ಕರೆದೊಯ್ಯುವ ಪ್ರಯತ್ನದಲ್ಲಿದ್ದಾರೆ. ಜನವರಿ 8ರಂದು ತಮ್ಮ 40ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿರುವ ಯಶ್ ಅವರ ಬದುಕಿನ ಪಯಣವೇ ಪ್ರೇರಣೆಯ ಕಥೆ.

ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಯಶ್, ಆರಂಭದಲ್ಲಿ ಅವಕಾಶಕ್ಕಾಗಿ ರಂಗಭೂಮಿ ಹಾಗೂ ಕಿರುತೆರೆಯನ್ನು ಆಶ್ರಯಿಸಿದ್ದವರು. ಸಿನಿಮಾ ನಟನಾಗುವ ಮೊದಲು ಅವರು ಬೆನಕ ರಂಗತಂಡದ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಅಲ್ಲಿ ಅವರಿಗೆ ದೊರೆತ ಮೊದಲ ಸಂಭಾವನೆ ಕೇವಲ 50 ರೂಪಾಯಿ. ಆ ಕಾಲದಲ್ಲಿ ಅದಕ್ಕೂ ಮೌಲ್ಯ ಇತ್ತು ಎನ್ನುವುದನ್ನು ಬಿಟ್ಟರೂ, ಯಶ್ ಏಕಾಏಕಿ ಸ್ಟಾರ್ ಆಗಿಲ್ಲ ಎಂಬುದಕ್ಕೆ ಇದು ಸ್ಪಷ್ಟ ಸಾಕ್ಷಿ.

ಯಶ್ ಯಾರ ಹಿನ್ನಲೆ ಬೆಂಬಲವಿಲ್ಲದೇ, ಯಾವುದೇ ಪ್ರಭಾವವಿಲ್ಲದೇ ಚಿತ್ರರಂಗಕ್ಕೆ ಬಂದವರು. ಅವರ ನಿಜ ಹೆಸರು ನವೀನ್ ಕುಮಾರ್. ಬಳಿಕ ಕಾನೂನುಬದ್ಧವಾಗಿ ‘ಯಶ್’ ಎಂಬ ಹೆಸರನ್ನು ಸ್ವೀಕರಿಸಿ, ಇಂದು ಅದೇ ಹೆಸರಿನಿಂದ ಜಗತ್ತಿನಾದ್ಯಂತ ಪರಿಚಿತರಾಗಿದ್ದಾರೆ. ಕಿರುತೆರೆಗೆ ಬರಲು ಮುನ್ನ ರಂಗಭೂಮಿಯಲ್ಲಿ ನಟನೆಯ ಮೂಲ ಪಾಠಗಳನ್ನು ಕಲಿತ ಅವರು, ಕಾಲೇಜು ದಿನಗಳಿಂದಲೇ ನೃತ್ಯದ ಮೇಲೂ ಅಪಾರ ಆಸಕ್ತಿ ಹೊಂದಿದ್ದರು.

ಸಿಕ್ಕ ಮಾಹಿತಿಯ ಪ್ರಕಾರ, ಸಿನಿಮಾ ಕನಸನ್ನು ಹೊತ್ತು ಯಶ್ ಮನೆ ಬಿಟ್ಟು ಬೆಂಗಳೂರಿಗೆ ಬಂದಾಗ ಅವರ ಬಳಿ ಇದ್ದದ್ದು ಕೇವಲ 300 ರೂಪಾಯಿ. ರಂಗಭೂಮಿಯ ನಂತರ ಕಿರುತೆರೆಯಲ್ಲಿ ಅವಕಾಶ ಪಡೆದು, 2007ರಲ್ಲಿ ‘ಜಂಭದ ಹುಡುಗಿ’ ಚಿತ್ರದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸಿದರು. ಆದರೆ ಅವರಿಗೆ ನಿಜವಾದ ಹೆಸರು ತಂದುಕೊಟ್ಟದ್ದು ರಾಧಿಕಾ ಪಂಡಿತ್ ಜೊತೆ ನಟಿಸಿದ ‘ಮೊಗ್ಗಿನ ಮನಸ್ಸು’ ಸಿನಿಮಾ. ಆ ಚಿತ್ರದ ಯಶಸ್ಸಿನ ಬಳಿಕ ಯಶ್ ಹಿಂದೆ ತಿರುಗಿ ನೋಡಲೇ ಇಲ್ಲ.

ಮೊಗ್ಗಿನ ಮನಸ್ಸು, ರಾಜಾಹುಲಿ, ಕಿರಾತಕ, ಡ್ರಾಮಾ ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ ಯಶ್, ‘ಕೆಜಿಎಫ್’ ಭಾಗ 1 ಮತ್ತು 2 ಮೂಲಕ ಕನ್ನಡ ಚಿತ್ರರಂಗದ ಗಡಿಗಳನ್ನು ದಾಟಿದರು. ಈ ಸಿನಿಮಾಗಳೇ ಅವರನ್ನು ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿ ರೂಪಿಸಿವೆ. ಇಂದಿನ ದಿನಗಳಲ್ಲಿ ಯಶ್ ಅವರ ಸಂಭಾವನೆ 50 ಕೋಟಿಯಿಂದ 100 ಕೋಟಿ ರೂಪಾಯಿವರೆಗೆ ಇದೆ ಎನ್ನಲಾಗುತ್ತಿದೆ. ಜೊತೆಗೆ ಅವರು ನಿರ್ಮಾಣದಲ್ಲೂ ಪಾಲುದಾರರಾಗಿರುವುದರಿಂದ, ಲಾಭಾಂಶದ ಪಾಲು ಸೇರಿ ಅವರ ಆದಾಯದ ನಿಖರ ಲೆಕ್ಕಾಚಾರ ಹೇಳುವುದು ಸುಲಭವಲ್ಲ.

ಕೆಜಿಎಫ್ ಬಳಿಕ ‘ಟ್ಯಾಕ್ಸಿಕ್’ ಸಿನಿಮಾದ ಮೂಲಕ ಯಶ್ ಮತ್ತೊಂದು ದೊಡ್ಡ ಹೆಜ್ಜೆ ಇಟ್ಟಿದ್ದಾರೆ. ಈ ಚಿತ್ರದ ಮೂಲಕ ಅವರು ಕನ್ನಡ ಚಿತ್ರರಂಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಬಲಪಡಿಸುವ ನಿರೀಕ್ಷೆ ಇದೆ. ತಮ್ಮ 40ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳಿಗೆ ವಿಶೇಷ ಉಡುಗೊರೆಯಾಗಿ ಟ್ರೈಲರ್ ಟೀಸರ್ ಬಿಡುಗಡೆ ಮಾಡಿದ್ದು, ಅದು ಈಗಾಗಲೇ 5.4 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಪರಿಶ್ರಮ, ತಾಳ್ಮೆ ಮತ್ತು ಕನಸಿನ ಮೇಲಿನ ನಂಬಿಕೆಯಿಂದ ಯಶ್ ಇಂದು ದೇಶದ ಪ್ರಮುಖ ತಾರೆಯಾಗಿ ಬೆಳೆದಿರುವುದು ಅನೇಕ ಯುವಕರಿಗೆ ಪ್ರೇರಣೆಯಾಗಿದೆ.


Share It

You cannot copy content of this page