ಭಾರತೀಯ ಕ್ರಿಕೆಟ್ ವಲಯವನ್ನು ದುಃಖಕ್ಕೆ ದೂಡಿದ ಘಟನೆ ಮಿಜೋರಾಂನಲ್ಲಿ ನಡೆದಿದೆ. ರಣಜಿ ಹಾಗೂ ಸೈಯದ್ ಮುಷ್ತಾಕ್ ಅಲಿ ಟ್ರೋಫಿಗಳಲ್ಲಿ ಮಿಜೋರಾಂ ತಂಡವನ್ನು ಪ್ರತಿನಿಧಿಸಿದ್ದ ಮಾಜಿ ಕ್ರಿಕೆಟಿಗ ಕೆ. ಲಾಲ್ರೆಮ್ರುವಾಟಾ ಅವರು ಸ್ಥಳೀಯ ಕ್ರಿಕೆಟ್ ಪಂದ್ಯವೊಂದರ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪಂದ್ಯ ನಡೆಯುತ್ತಿದ್ದಾಗ ಏಕಾಏಕಿ ಅಸ್ವಸ್ಥರಾಗಿದ್ದ ಅವರು ಮೈದಾನದಲ್ಲೇ ಕುಸಿದುಬಿದ್ದಿದ್ದು, ಬಳಿಕ ಜೀವ ಉಳಿಯಲಿಲ್ಲ ಎಂದು ರಾಜ್ಯ ಕ್ರಿಕೆಟ್ ಸಂಸ್ಥೆ ಮಾಹಿತಿ ನೀಡಿದೆ.
ಕ್ರಿಕೆಟ್ ಆಡುತ್ತಿರುವ ಸಂದರ್ಭದಲ್ಲೇ ಆಟಗಾರರ ಸಾವು ಅಪರೂಪವೆನಿಸಿದರೂ, ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಮರುಮರು ಕೇಳಿಬರುತ್ತಿರುವುದು ಕಳವಳಕಾರಿಯಾಗಿದೆ. ಐಜ್ವಾಲ್ ಸಮೀಪದ ಮಾವ್ಬೋಕ್ ನಿವಾಸಿಯಾಗಿದ್ದ 38 ವರ್ಷದ ಲಾಲ್ರೆಮ್ರುವಾಟಾ, ಎರಡನೇ ಡಿವಿಷನ್ ಟೂರ್ನಮೆಂಟ್ನಲ್ಲಿ ವೈಂಗ್ನುವೈ ರೈಡರ್ಸ್ ಕ್ರಿಕೆಟ್ ಕ್ಲಬ್ ಪರವಾಗಿ ಕಣಕ್ಕಿಳಿದಿದ್ದರು. ಪಂದ್ಯ ನಡೆಯುವ ವೇಳೆ ಅವರಿಗೆ ತೀವ್ರ ಉಸಿರಾಟದ ತೊಂದರೆ ಉಂಟಾಗಿ ಹೃದಯಾಘಾತ ಸಂಭವಿಸಿದೆ ಎನ್ನಲಾಗಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಮಿಜೋರಾಂ ಕ್ರಿಕೆಟ್ ಸಂಸ್ಥೆ (CAM), “ಲಾಲ್ರೆಮ್ರುವಾಟಾ ಅವರು ರಣಜಿ ಟ್ರೋಫಿಯಲ್ಲಿ ಎರಡು ಬಾರಿ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಏಳು ಬಾರಿ ಮಿಜೋರಾಂ ತಂಡವನ್ನು ಪ್ರತಿನಿಧಿಸಿದ್ದರು. ಸ್ಥಳೀಯ ಮಟ್ಟದಲ್ಲಿಯೂ ಅನೇಕ ಕ್ಲಬ್ಗಳ ಪರವಾಗಿ ಅವರು ಆಡಿದ್ದರು. ಅವರ ಅಕಾಲಿಕ ನಿಧನ ನಮ್ಮೆಲ್ಲರಿಗೂ ದೊಡ್ಡ ಆಘಾತ. ಈ ದುಃಖದ ಸಂದರ್ಭದಲ್ಲಿ ನಾವು ಅವರ ಕುಟುಂಬದೊಂದಿಗೆ ನಿಲ್ಲುತ್ತೇವೆ” ಎಂದು ತಿಳಿಸಿದೆ.
ಇತ್ತ ಮಿಜೋರಾಂನ ಕ್ರೀಡಾ ಹಾಗೂ ಯುವಜನ ಸೇವೆಗಳ ಸಚಿವ ಲಾಲ್ಘಿಂಗ್ಲೋವಾ ಹ್ಮಾರ್ ಅವರು ಕೂಡ ಸಂತಾಪ ಸೂಚಿಸಿದ್ದು, “ವೆಂಗ್ನುವೈ ರೈಡರ್ಸ್ ಮತ್ತು ಚಾವ್ನ್ಪುಯಿ ಇಲ್ಮೋವ್ ಕ್ರಿಕೆಟ್ ಕ್ಲಬ್ ನಡುವಿನ ಪಂದ್ಯ ನಡೆಯುತ್ತಿದ್ದಾಗ ಅವರಿಗೆ ಏಕಾಏಕಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ಈ ದುಃಖದ ಕ್ಷಣದಲ್ಲಿ ಅವರ ಕುಟುಂಬ ಮತ್ತು ಆಪ್ತರಿಗೆ ನನ್ನ ಸಂತಾಪಗಳು” ಎಂದು ಹೇಳಿದ್ದಾರೆ.
ರಾಜ್ಯ ತಂಡದಿಂದ ನಿವೃತ್ತಿ ಪಡೆದ ಬಳಿಕವೂ ಲಾಲ್ರೆಮ್ರುವಾಟಾ ಕ್ರಿಕೆಟ್ನಿಂದ ದೂರವಾಗಿರಲಿಲ್ಲ. ರಾಜ್ಯ ಮಟ್ಟದ ಟೂರ್ನಮೆಂಟ್ಗಳು ಹಾಗೂ ಸ್ಥಳೀಯ ಕ್ಲಬ್ ಪಂದ್ಯಗಳಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಜೊತೆಗೆ ಹಿರಿಯ ಟೂರ್ನಮೆಂಟ್ ಸಮಿತಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಹಾಗೂ ಯುವ ಆಟಗಾರರನ್ನು ಪ್ರೋತ್ಸಾಹಿಸುವ ಮೂಲಕ ಮಿಜೋರಾಂನಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ನಿರಂತರವಾಗಿ ಕೊಡುಗೆ ನೀಡಿದ್ದರು. ಅವರ ನಿಧನದಿಂದ ಮಿಜೋರಾಂ ಕ್ರಿಕೆಟ್ ವಲಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.

