ಭಾರತದ ಕೇಂದ್ರ ಬ್ಯಾಂಕ್ ಆಗಿರುವ ಭಾರತೀಯ ರಿಸರ್ವ್ ಬ್ಯಾಂಕ್ (RBI) 2026ನೇ ಸಾಲಿನ ಆಫೀಸ್ ಅಟೆಂಡೆಂಟ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸಕ್ತಿ ಹೊಂದಿರುವ ಹಾಗೂ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ದೇಶದ ವಿವಿಧ ಶಾಖೆಗಳಲ್ಲೂ ಸೇರಿ ಒಟ್ಟು 572 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಬೆಂಗಳೂರು ವಲಯಕ್ಕೆ ಮಾತ್ರವೇ 16 ಹುದ್ದೆಗಳು ಲಭ್ಯವಿವೆ. ಈ ನೇಮಕಾತಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
ಅರ್ಜಿಯ ಅವಧಿ ಮತ್ತು ಪರೀಕ್ಷಾ ದಿನಾಂಕಗಳು: RBI ಆಫೀಸ್ ಅಟೆಂಡೆಂಟ್ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ 2026ರ ಜನವರಿ 15ರಿಂದ ಆರಂಭವಾಗಿದೆ. ಅರ್ಜಿ ಸಲ್ಲಿಸಲು ಫೆಬ್ರವರಿ 4, 2026 ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ವಿಳಂಬ ಮಾಡದೇ ಸಮಯಕ್ಕೆ ಮುನ್ನ ಅರ್ಜಿ ಸಲ್ಲಿಸುವುದು ಒಳಿತು. ಈ ಹುದ್ದೆಗಳ ಲಿಖಿತ ಪರೀಕ್ಷೆಯನ್ನು 2026ರ ಫೆಬ್ರವರಿ 28 ಮತ್ತು ಮಾರ್ಚ್ 1ರಂದು ನಡೆಸಲು ನಿರ್ಧರಿಸಲಾಗಿದೆ.
ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ: ಅರ್ಜಿದಾರರು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ (SSC/ಮ್ಯಾಟ್ರಿಕ್ಯುಲೇಷನ್) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಜೊತೆಗೆ, ಅಭ್ಯರ್ಥಿಯು ತಾನು ಅರ್ಜಿ ಸಲ್ಲಿಸುವ RBI ಕಚೇರಿಯ ವ್ಯಾಪ್ತಿಗೆ ಒಳಪಡುವ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ನಿವಾಸಿಯಾಗಿರಬೇಕು.
ವಯೋಮಿತಿಯ ವಿಚಾರದಲ್ಲಿ ಅಭ್ಯರ್ಥಿಯ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 25 ವರ್ಷಗಳೊಳಗಿರಬೇಕು. ಅಂದರೆ 2001ರ ಜನವರಿ 2ಕ್ಕಿಂತ ಮುಂಚೆ ಹಾಗೂ 2008ರ ಜನವರಿ 1ನಂತರ ಜನಿಸಿದವರು ಅರ್ಹರಾಗುವುದಿಲ್ಲ.
ಆಯ್ಕೆ ಪ್ರಕ್ರಿಯೆ: ನೇಮಕಾತಿ ಪ್ರಕ್ರಿಯೆ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತವಾಗಿ ಆನ್ಲೈನ್ ಪರೀಕ್ಷೆ ನಡೆಯುತ್ತಿದ್ದು, ಇದರಲ್ಲಿ ಒಟ್ಟು 120 ಪ್ರಶ್ನೆಗಳು ಮತ್ತು 120 ಅಂಕಗಳಿರುತ್ತವೆ. ಪರೀಕ್ಷೆಗೆ 90 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ.
ಆನ್ಲೈನ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಮುಂದಿನ ಹಂತವಾದ ಭಾಷಾ ಪ್ರಾವೀಣ್ಯತೆ ಪರೀಕ್ಷೆಗೆ (LPT) ಆಹ್ವಾನಿಸಲಾಗುತ್ತದೆ. ಇದು ಕೇವಲ ಅರ್ಹತಾ ಪರೀಕ್ಷೆಯಾಗಿದ್ದು, ಆಯಾ ರಾಜ್ಯದ ಸ್ಥಳೀಯ ಅಥವಾ ಅಧಿಕೃತ ಭಾಷೆಯಲ್ಲಿ ನಡೆಯುತ್ತದೆ. ಬೆಂಗಳೂರು ವಲಯಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಜ್ಞಾನ ಕಡ್ಡಾಯವಾಗಿದೆ.
ಅರ್ಜಿ ಶುಲ್ಕದ ವಿವರ: ಸಾಮಾನ್ಯ ವರ್ಗ, OBC ಹಾಗೂ EWS ಅಭ್ಯರ್ಥಿಗಳು 450 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದಕ್ಕೆ 18% ಜಿಎಸ್ಟಿ ಹೆಚ್ಚುವರಿಯಾಗಿ ಅನ್ವಯವಾಗುತ್ತದೆ.
SC, ST, PwBD ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂ. ಶುಲ್ಕ ನಿಗದಿಪಡಿಸಲಾಗಿದ್ದು, ಇದಕ್ಕೂ 18% ಜಿಎಸ್ಟಿ ಸೇರಲಿದೆ. ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ವಾಲೆಟ್ ಮೂಲಕ ಪಾವತಿಸಬಹುದು.
ಅರ್ಜಿ ಸಲ್ಲಿಸುವ ವಿಧಾನ: ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು RBIಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ‘Career’ ವಿಭಾಗದಲ್ಲಿ ಲಭ್ಯವಿರುವ ನೇಮಕಾತಿ ಅಧಿಸೂಚನೆಯನ್ನು ಪರಿಶೀಲಿಸಬಹುದು. ಅಲ್ಲಿ ನೀಡಿರುವ ಆನ್ಲೈನ್ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಹಾಕುವ ಮೊದಲು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸುವುದು ಅತ್ಯಂತ ಮುಖ್ಯ.
ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವವರಿಗೆ RBIಯ ಈ ನೇಮಕಾತಿ ಭವಿಷ್ಯ ರೂಪಿಸಿಕೊಳ್ಳಲು ಒಳ್ಳೆಯ ಅವಕಾಶವಾಗಿದೆ.

