ಬೆಂಗಳೂರು: “ವಿಪಕ್ಷಗಳು ನಮ್ಮನ್ನು, ನಾವು ವಿಪಕ್ಷಗಳನ್ನು ಟೀಕೆ ಮಾಡುವುದು ಸ್ವೀಕಾರರ್ಹ. ಆದರೆ ಎಲ್ಲದಕ್ಕೂ ಒಂದು ಮಿತಿ ಎಂಬುದು ಇರುತ್ತದೆ. ವಿಪಕ್ಷಗಳು ಈ ದೇಶದ ಕಾನೂನನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ವಿಧಾನಸೌಧದ ಬಳಿ ಮಾಧ್ಯಮಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದರು. ಆಧಾರರಹಿತ ಪೋಸ್ಟ್ ಮಾಡಿರುವ ಬಿಜೆಪಿ ವಿರುದ್ದ ಕೆಪಿಸಿಸಿಯಿಂದ ದೂರು ನೀಡಿರುವ ಬಗ್ಗೆ ಕೇಳಿದಾಗ, “ನಾವು ಸಹ ನಮ್ಮ ಪಕ್ಷದವರಿಗೆ ಕಾನೂನಿಗೆ ವಿರುದ್ಧವಾಗಿ ಯಾವುದೇ ಟೀಕೆ ಮಾಡಬೇಡಿ ಎಂದು ಸಂದೇಶ ನೀಡಿದ್ದೇನೆ. ಯಾವುದೇ ಪಕ್ಷ ಅಥವಾ ವ್ಯಕ್ತಿ ತನಗೆ ಇರುವ ಸ್ವಾತಂತ್ರ್ಯವನ್ನು ಹೀಗೆ ದುರುಪಯೋಗ ಮಾಡಿಕೊಳ್ಳಬಾರದು.
ಅದಕ್ಕೆ ಕಾನೂನು ಕ್ರಮದ ಮೊರೆ ಹೋಗಬೇಕಾಯಿತು. ಕಾನೂನು ತನ್ನ ಕ್ರಮ ಕೈಗೊಳ್ಳಲಿದೆ. ಕೆಪಿಸಿಸಿ ಸಾಮಾಜಿಕ ಜಾಲತಾಣದಲ್ಲಿ ನಿಮ್ಮನ್ನು ಬ್ರಾಂಡ್ ಎಂದು ಟ್ವೀಟ್ ಮಾಡಿದ್ದು, ಅಧಿಕಾರ ಹಂಚಿಕೆ ಗುದ್ದಾಟಕ್ಕೆ ಈ ರೀತಿ ಬಿಂಬಿಸಲಾಗಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, “ಏನು ಟೀಕೆ ಮಾಡುತ್ತಾರೋ ಮಾಡಲಿ” ಎಂದರು.

