ಬೆಂಗಳೂರು: ಬಸ್ ಮತ್ತು ಬಸ್ ನಿಲ್ದಾಣಗಳ ಮೇಲಿನ ಜಾಹೀರಾತುಗಳನ್ನು ಹರಿದು ಹಾಕುವವರ ವಿರುದ್ಧ FIR ದಾಖಲಸಲು KSRTC ಸಿದ್ಧತೆ ನಡೆಸಿದ್ದು, ಇಂತಹ ಪ್ರಕರಣಗಳಲ್ಲಿ ಅಂತಹವರ ವಿರುದ್ಧ ದೂರು ನೀಡುವಂತೆ ಸೂಚಿಸಿದೆ.
ಕೆಲವು ತಂಬಾಕು ಉತ್ಪನ್ನಗಳನ್ನು ಬಸ್ಗಳ ಮೇಲೆ ಹಾಕಲಾಗಿದೆ ಎಂಬ ಕಾರಣಕ್ಕೆ ಸಾರ್ವಜನಿಕರು ಹರಿದು ಹಾಕುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದು ದಿನೇದಿನೆ ಹೆಚ್ಚಾಗುತ್ತಿದ್ದು, ಬಸ್ ನಿಲ್ದಾಣಗಳ ಮೇಲಿನ ಪೋಸ್ಟರ್ಗಳು ಮತ್ತು ಬಸ್ ಗಳ ಮೇಲಿನ ಪೋಸ್ಟರ್ ಹರಿದು ಹಾಕಲಾಗುತ್ತಿದೆ. ಇಂತಹವರ ವಿರುದ್ಧ ದೂರು ನೀಡಿ FIR ದಾಖಲಿಸಿ ಎಂದು ಕೆಎಸ್ಆರ್ಟಿಸಿ ಎಂಡಿ ಸೂಚನೆ ನೀಡಿದ್ದಾರೆ.
ಜಾಹೀರಾತುಗಳ ಬಗ್ಗೆ ಸಾರ್ವಜನಿಕರಿಗೆ ಆಕ್ಷೇಪಣೆಗಳಿದ್ದರೆ ದೂರು ನೀಡಬೇಕು. ನಮಗೆ ಅಂತಹ ಜಾಹೀರಾತುಗಳು ಆಕ್ಷೇಪಣಾರ್ಹ ಎನಿಸಿದರೆ ನಾವೇ ತೆರವುಗೊಳಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ಆದರೆ, ಇದನ್ನೇ ನೆಪವಾಗಿಟ್ಟುಕೊಂಡು ಕೆಲವು ಕಿಡಿಗೇಡಿಗಳು ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ, ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ ಎಂದು ಹೇಳಿದ್ದಾರೆ.
ಪೋಸ್ಟರ್ ಹರಿದು ಹಾಕುವುದು, ಬಸ್ಗಳಿಗೆ ಹಾನಿ ಮಾಡುವುದು ಮಾಡಿದರೆ, ಅಂತಹವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದೂರು ನೀಡಿ, ಅವರ ವಿರುದ್ಧ FIR ದಾಖಲಿಸಬೇಕು ಎಂದು ಎಲ್ಲ ನಿಗಮಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇನ್ಮುಂದೆ ದೂರು ನೀಡದೆ ಸುಮ್ಮಸುಮ್ಮನೇ ಜಾಹೀರಾತು ಫಲಕಗಳನ್ನು ಹರಿದುಹಾಕಿದರೆ ಕೇಸ್ ಬೀಳಲಿವೆ.

