ಸುದ್ದಿ

ಡಾ.ಎಸ್.ಎನ್.ಹೆಗಡೆ ಅವರ ವೈದ್ಯಕೀಯ ಕ್ಷೇತ್ರದ ನೊಬೆಲ್ ಪುರಸ್ಕೃತರು ಪುಸ್ತಕ ಬಿಡುಗಡೆ

Share It

ಶಿರಸಿ: ಡಾ ಎಸ ಎನ್ ಹೆಗಡೆ ಮೈಸೂರು ಇವರು ಬರೆದ “ವೈದ್ಯಕೀಯ ಕ್ಷೇತ್ರದ ನೊಬೆಲ್ ಪುರಸ್ಕೃತರು” ಎನ್ನುವ ಪುಸ್ತಕವನ್ನು ಸಿದ್ದಾಪುರ ತಾಲ್ಲೂಕಿನ ಗಡಿಹಿತ್ತಲಿನಲ್ಲಿ ಬಿಡುಗಡೆಗೊಳಿಸಲಾಯಿತು.

ಒಂದು ವರ್ಷದ ಹಿಂದೆ ದೈವಾಧೀನರಾದ ತಮ್ಮ ಸಹೋದರಿ ಜಾನ್ನಕಿ ಮಹಾಬಲೇಶ್ವರ ಭಟ್ ಇವರಿಗೆ ಲೇಖಕರು ಕೃತಿಯನ್ಮು ಅರ್ಪಿಸಿದ್ದರು. ಹಾಗಾಗಿ, ಅವರ ವರ್ಷಾಂತಿಕದ ಸಂಧರ್ಭದಲ್ಲಿ ಕುಟುಂಬ ಮತ್ತು ಬಂಧುಗಳ ಸಮ್ಮುಖದಲ್ಲಿ ಪುಸ್ತಕ ಲೋಕಾರ್ಪಣೆಗೊಳಿಸಲು ತೀರ್ಮಾನಿಸಿ ಕಾರ್ಯಕ್ರಮ ಹಮ್ಮಿಕೊಂಡು ತಮ್ಮ ಬಾವ ಮಹಾಬಲೇಶ್ವರ ಭಟ್ ಮತ್ತು ಪುರೋಹಿತರಿಂದ ಬಿಡುಗಡೆಗೊಳಿಸಿದರು.

ಡಾ.ಎಸ್.ಎನ್. ಹೆಗಡೆ ಅವರು ಕಳೆದ 44 ವರ್ಷಗಳಿಂದ ಕನ್ನಡ ವಿಜ್ಞಾನ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯ ಹೊರತಂದ ಕನ್ನಡ ವಿಷಯ ವಿಶ್ವಕೋಶ-ಪ್ರಾಣಿವಿಜ್ಞಾನದ ಸಂಪಾದನೆ, ಧಾರವಾಡದ ರಾಮಾಶ್ರಯ ಬುಕ್ ಡಿಪೊದ ಚೈತನ್ಯ ಪ್ರಕಾಶನ ಹೊರತಂದ ಇಂಗ್ಲಿಷ್-ಕನ್ನಡ ಜೀವಶಾಸ್ತ್ರ ನಿಘಂಟುಗಳು ಇವರ ಅತ್ಯುತ್ತಮ ಕೊಡುಗೆಗಳು.

ವಿಜ್ಞಾನ ಕರ್ಣಾಟಕದ ಸಂಪಾದಕರಾಗಿ, ಸಾಮಾನ್ಯ ವಿಶ್ವಕೋಶದ 13 ಮತ್ತು 14ನೆ ಸಂಪುಟಗಳ ಗೌರವ ಸಮಾಲೋಚಕರಾಗಿ, ಮೈಸೂರಿನ ಕನ್ನಡಿಗರ ಪ್ರಜಾನುಡಿ’ ಹಾಗೂ ವಿಜಯ ಕರ್ನಾಟಕದಲ್ಲಿ ಜೀವವಿಜ್ಞಾನ ಅಂಕಣಕಾರರಾಗಿ ಹಾಗೂ ಆಕಾಶವಾಣಿ, ದೂರದರ್ಶನಗಳ ಕಾರ್ಯಕ್ರಮಗಳ ಮೂಲಕ ಪ್ರಾಣಿವಿಜ್ಞಾನವನ್ನು ಜನಪ್ರಿಯಗೊಳಿಸುವುದರಲ್ಲಿ ಬಹು ಮುಖ್ಯ ಪಾತ್ರ ವಹಿಸಿದ್ದಾರೆ. ಇವರ ಮಾರ್ಗದರ್ಶನದಲ್ಲಿ 18 ಮಂದಿ ಪಿಎಚ್.ಡಿ. ಪಡೆದಿದ್ದಾರೆ.

“ವೈದ್ಯಕೀಯ ಕ್ಷೇತ್ರದ ನೊಬೆಲ್ ಪುರಸ್ಕೃತರು” ಇವರ ೪೮ ನೇ ಕೃತಿ. ಇವರ ವಿಜ್ಞಾನ ಕ್ಷೇತ್ರದ ಸೇವೆಗೆ ಅನೇಕ ಪ್ರಶಸ್ತಿಗಳು ಸಂದಿವೆ. ಪ್ರಾಣಿಗಳ ವರ್ತನೆಗೆ ಸಂಬಂಧಿಸಿದ ಇವರು ಪ್ರತಿಪಾದಿಸಿದ ‘ಬಿಗ್ಗರ್ ಈಸ್ ಬೆಟರ್’ ಎಂಬ ನಿಯಮ ಅಂತಾರಾಷ್ಟ್ರೀಯ ಮನ್ನಣೆ ಪಡೆದಿದೆ. ಪ್ರೊಸಾಫಿಲಕೀಟದ ಪ್ರಭೇದವೊಂದಕ್ಕೆ ಡೊಸಾಫಿಲ ಹೆಗಡಿಯ್ಕೆ ಎಂದು ಇವರ ಹೆಸರು ಇಡಲಾಗಿದೆ.

ಅಭಿಜ್ಞಾ ಮತ್ತು ಪ್ರಾರ್ಥನಾ ಅವರು ಭಗವದ್ಗೀತಾ ಪಠಣದ ಮೂಲಕ ಕಾರ್ಯಕ್ರಮ ಪ್ರಾರಂಭಿಸಿದರು. ಲತಾ ಅವರು ಅಂದವಾಗಿ ಕಾರ್ಯಕ್ರಮ ನಿರ್ವಹಿಸಿಕೊಟ್ಟರು. ಲೇಖಕರಾದ ಡಾ ಎಸ್ ಎನ್ ಹೆಗಡೆ ಮಾತನಾಡಿ ಹುಟ್ಟು ಆಕಸ್ಮಿಕ , ಸಾವು ಖಚಿತ , ಆದರೆ, ಕೆಲವರು  ಮಾಡುವ ಕೆಲಸ ನಮ್ಮನ್ನು ಚಿರಂಜೀವಿಯನ್ನಾಗಿಸುತ್ತದೆ ಎಂದರು.

ಅವರು ತಮ್ಮ ಬಾಲ್ಯದಲ್ಲಿ ಸಹೋದರ ಸಹೋದರಿಯರೊಂದಿಗೆ ಪಟ್ಟ ಕಷ್ಟಗಳನ್ನು ನೆನೆದು ಭಾವುಕರಾಗಿ ಅಂತಹ ಸಮಯದಲ್ಲಿ ಜತೆಗಿದ್ದ ಪ್ರೀತಿಯ ತಂಗಿಯ ನೆನಪು ಶಾಶ್ವತವಾಗಿ ಇರಲಿ ಎಂದು ಪುಸ್ತಕವನ್ನು ಅರ್ಪಿಸಿದ್ದೇನೆ ಎಂದು ತಮ್ಮ ಭಾವನೆಗಳನ್ನು ಹಂಚಿಕೊಂಡರು.ಎಂದೂ ಯಾವುದೇ ಪ್ರಶಸ್ತಿಗಳಿಗೂ ಅರ್ಜಿ ಹಾಕದಿದ್ದರೂ ಸಾಕಷ್ಟು ಪ್ರಶಸ್ತಿ ಸನ್ಮಾನಗಳು ಬಂದಿವೆ, ಹೀಗೆ ಮುಂದಿನ ಜೀವನವು ಆರೋಗ್ಯಕರವಾಗಿ ಸಾಗಲಿ ಎಂದು ನೆರೆದಿದ್ದ ಬಂಧುಗಳು ಶುಭ ಕೋರಿದರು.

ಕಾರ್ಯಕ್ರಮದ ಕೊನೆಯಲ್ಲಿ ಡಾ ಹೆಗಡೆ ಅವರ ಹಿರಿಯ ಅಕ್ಕ ಭುವನೇಶ್ವರಿ ಹೆಗಡೆ ಅವರು ಶಾಲು ಹೊದೆಸಿ ಲೇಖಕರನ್ನು ಗೌರವಿಸಿದರು.


Share It

You cannot copy content of this page