ಬೆಂಗಳೂರು: ಖ್ಯಾತ ನಿರ್ದೇಶಕ ಜೋಸೈಮನ್ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಇಂದು ಸಂಜೆ 4.30ರಲ್ಲಿ ನಡೆದಿದೆ.
ವಾಣಿಜ್ಯ ಮಂಡಳಿ ಕಾರ್ಯಕಾರಿ ಸಭೆಯ ವೇಳೆಯೇ ಜೋಸೈಮನ್ ಹೃದಯಾಘಾತಕ್ಕೆ ಒಳಗಾಗಿದ್ದರು. ಮಧ್ಯಾಹ್ನ 3ಕ್ಕೆ ಸಭೆ ಆರಂಭವಾಗಿತ್ತು, ಸಭೆಯ ನಡುವೆಯೇ ಮಂಡಳಿಯ
ವಾಶ್ ರೂಮ್ ಬಳಿ ಕುಸಿದು ಬಿದ್ದ ಜೋಸೈಮನ್ ಅವರನ್ನು ಪಕ್ಕದಲ್ಲಿಯೇ ಇರುವ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಚಿಕಿತ್ಸೆ ಫಲಿಸದೆ ನಿಧನರಾದರು.
ಇದೀಗ ಅವರ ಪಾರ್ಥೀವ ಶರೀರವನ್ನು ಜೆ.ಪಿ. ನಗರದಲ್ಲಿರುವ ಅವರ ನಿವಾಸಕ್ಕೆ ತರಲಾಗಿದ್ದು, ಕುಟುಂಬಸ್ಥರು ಮತ್ತು ಬಂಧುಗಳಿಗೆ ಅಂತಿಮ ನಮನಕ್ಕೆ ಅವಕಾಶ ನೀಡಲಾಗಿದೆ.
ಶನಿವಾರ ಬೆಳಗ್ಗೆ 10 ಗಂಟೆಯಿಂದ 1 ಗಂಟೆಯವರೆಗೆ ಕನ್ನಡ ಭವನದಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅನಂತರ ಅಂತಿಮ ಸಂಸ್ಕಾರ ನಡೆಯಲಿದೆ.
ಕನ್ನಡ ಚಿತ್ರರಂಗದಲ್ಲಿ ನಟ, ನಿರ್ದೇಶಕ, ಡೈಲಾಗ್ ರೈಟರ್ ಆಗಿ ಕಾರ್ಯನಿರ್ವಹಿಸಿದ್ದ ಜೋಸೈಮನ್ ಅವರು, ಸಿಂಹಜೋಡಿ, ಸಾಹಸ ಸಿಂಹ, ಹಾಂಕಾಂಗ್ನಲ್ಲಿ ಅಮರ್, ಸ್ನೇಹದ ಕಡಲಲ್ಲಿ ಸೇರಿ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದರು.

