ಉಪಯುಕ್ತ ಸುದ್ದಿ

ಮೇ 12 ರವರೆಗೆ ಬೆಂಗಳೂರಿನಲ್ಲಿ ಬೇಸಿಗೆ ಮಳೆ!

Share It

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಬಿರು ಬಿಸಿಲ ಬಳಿಕ‌ ಮಳೆ ಸುರಿಯುತ್ತಿದೆ.

ಬೆಂಗಳೂರಿನಲ್ಲಿ ಸತತ 4ನೇ ದಿನವೂ ಮಳೆಯಾಗಿದೆ. ಕೆಲವೆಡೆ ಮಳೆ ಅವಾಂತರ ಸೃಷ್ಟಿಸಿದೆ. ಬೆಂಗಳೂರಿನಲ್ಲಿ ಗುರುವಾರ ಸಂಜೆ ಶುರುವಾದ ಗುಡುಗು ಸಹಿತ ಮಳೆ ಮಧ್ಯರಾತ್ರಿವರೆಗೂ ಜಿಟಿಜಿಟಿ ಎಂದು ಸುರಿದಿದೆ. ಪರಿಣಾಮ ಇದೇ ಮೊದಲ ಬಾರಿಗೆ ಬೇಸಿಗೆಯಲ್ಲೂ ಕಚೇರಿ ಇನ್ನಿತರ ಕೆಲಸ ಕಾರ್ಯ ಮುಗಿಸಿ ಮನೆಗೆ ಹೋಗುವವರು ಪರದಾಡಿದ್ದಾರೆ. ಮೈಸೂರು ರಸ್ತೆಯಲ್ಲಿ ನೀರು ನಿಂತು ಕೆರೆಯಂತಾಗಿತ್ತು. ರಾಜರಾಜೇಶ್ವರಿನಗರ-ಜ್ಞಾನಭಾರತಿ ನಡುವೆ ಕೆಲಕಾಲ ಸಂಚಾರ ವ್ಯತ್ಯಯವಾಗಿತ್ತು.

ಜೊತೆಗೆ ನಗರದಲ್ಲಿ ಗಾಳಿ ಮಳೆಗೆ ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿವೆ. ಇದರಿಂದ ಬೆಸ್ಕಾಂಗೆ ದೂರುಗಳ ಸರಮಾಲೆಯೇ ಬರುತ್ತಿದೆ. ಹೀಗಾಗಿ ತ್ವರಿತವಾಗಿ ಸಮಸ್ಯೆ ಇತ್ಯರ್ಥಕ್ಕೆ ಬೆಸ್ಕಾಂ ವಾಟ್ಸಾಪ್ ಹೆಲ್ಪ್​ಲೈನ್ ಆರಂಭಿಸಿದೆ. ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲಿ ವಿಪತ್ತು ನಿರ್ವಹಣೆಯ ಕಂಟ್ರೋಲ್ ರೂಂ ತೆರೆದಿದೆ.

ಗುರುವಾರ ರಾತ್ರಿಯೂ ಬೆಂಗಳೂರಿನಲ್ಲಿ ಗಾಳಿ ಮಳೆಗೆ 70 ಮರಗಳು ಧರೆಗೆ ಉರುಳಿವೆ. ಬೆಂಗಳೂರು ದಕ್ಷಿಣ ವಲಯದಲ್ಲಿ 10, ಆರ್ ಆರ್ ನಗರ ವಲಯದಲ್ಲಿ 32, ಬೊಮ್ಮನಹಳ್ಳಿಯಲ್ಲಿ 06, ಪಶ್ಚಿಮ ವಲಯದಲ್ಲಿ 10, ಮಹಾದೇವಪುರದಲ್ಲಿ 01, ಯಲಹಂಕದಲ್ಲಿ 3, ಪೂರ್ವ ವಲಯದಲ್ಲಿ 6, ದಾಸರಹಳ್ಳಿ ವಲಯದಲ್ಲಿ 2 ಸೇರಿ 70 ಮರಗಳು ಧರೆಗೆ ಉರುಳಿವೆ.

ಹೊಸಪೇಟೆ ಸೇರಿ ಹಲವೆಡೆ ಬೆಳೆ ನಾಶ : ಇನ್ನು ಹೊಸಪೇಟೆ ಭಾಗದಲ್ಲಿ ಭಾರಿ ಮಳೆ ರೈತರಲ್ಲಿ ಮಂದಹಾಸ ಮೂಡಿಸಿದೆ. ಆದರೆ ಕೆಲವೆಡೆ ಬೆಳೆಗೆ ಕಂಟಕವಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಬಿರುಗಾಳಿ ಸಹಿತ ಮಳೆಗೆ ಹತ್ತಾರು ಎಕರೆ ಬಾಳೆ ಬೆಳೆ ನಾಶವಾಗಿದೆ.

ಬಳ್ಳಾರಿ ತಾಲೂಕಿನ ಕಪ್ಪಗಲ್ ಗ್ರಾಮದಲ್ಲಿ ಸಿಡಿಲು ಬಡಿದು ದೊಡ್ಡಬಸಯ್ಯ ಎಂಬ ರೈತನಿಗೆ ಸೇರಿದ 2 ಎತ್ತುಗಳು ಸಾವನ್ನಪ್ಪಿವೆ. ಸುಮಾರು ಒಂದು ಲಕ್ಷ ರೂಪಾಯಿ ಬೆಲೆ ಬಾಳುವ ಈ ಎತ್ತುಗಳನ್ನ ಕಳೆದುಕೊಂಡು ರೈತ ಕಣ್ಣೀರು ಸುರಿಸಿದ್ದಾನೆ.

ಬೆಂಗಳೂರಿನಲ್ಲಿ ಇನ್ನೂ ಮೂರ್ನಾಲ್ಕು ದಿನ ಮಳೆ: ಮೇ 12 ರವರೆಗೂ ಬೆಂಗಳೂರು ಹಾಗೂ ದಕ್ಷಿಣ ಒಳನಾಡಿನಲ್ಲಿ ಗುಡುಗು, ಸಿಡಿಲು, ಬಿರುಗಾಳಿ ಸಹಿತ 40 ರಿಂದ 50 ಕಿಮೀ ವೇಗದ ಗಾಳಿಯೊಂದಿಗೆ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಮೇ12 ರ ಬಳಿಕ ಬೆಂಗಳೂರಿಗೆ ಹೆಚ್ಚಿನ ಮಳೆ ಸಾಧ್ಯತೆ ಜೊತೆಗೆ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ಮಧ್ಯೆ,ಬೆಂಗಳೂರು ನಗರದಾದ್ಯಂತ ವಾಹನ ಸಂಚಾರಕ್ಕೆ ಅಡ್ಡಿಯಾಗುವುದನ್ನು ತಪ್ಪಿಸಲು ಸಂಚಾರ ಪೊಲೀಸರು ಹಲವು ಪೂರ್ವಸಿದ್ಧತಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಮರ ಬಿದ್ದಂಥ ಘಟನೆಗಳು ವರದಿಯಾದರೆ, ಪ್ರತಿ ವಾರ್ಡ್ ಕಚೇರಿಯಲ್ಲಿ ಇರುವ ಮರ ಕಡಿಯುವ ಯಂತ್ರವನ್ನು ಬಳಸಿ ಮರವನ್ನು ತೆರವುಗೊಳಿಸಲು ಸಂಚಾರ ಪೊಲೀಸರು ಸ್ಥಳೀಯ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ಮುಂದಾಗಿದ್ದಾರೆ. ವಿದ್ಯುತ್ ಕಂಬ ಬಿದ್ದರೆ ಮತ್ತು ವಿದ್ಯುತ್ ತಂತಿ ಬಿದ್ದರೆ ತಕ್ಷಣವೇ ಬೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿ ಕ್ರಮ ಕೈಗೊಳ್ಳುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ.

ಗುರುವಾರ ಸಂಜೆ ಮತ್ತು ರಾತ್ರಿ ಮೆಜೆಸ್ಟಿಕ್, ಯಶವಂತಪುರ, ರಾಜಾಜಿನಗರ, ಮಲ್ಲೇಶ್ವರಂ, ವಿಜಯನಗರ, ವಸಂತನಗರ, ಶಿವಾಜಿನಗರ, ಜಯನಗರ, ಚಂದ್ರಲೇಔಟ್, ಬನಶಂಕರಿ, ಸದಾಶಿವನಗರ, ಆರ್‌.ಟಿ.ನಗರ, ಹೆಬ್ಬಾಳ, ಸಹಕಾರನಗರ, ಭಾಷ್ಯಂ ಸರ್ಕಲ್ ಸೇರಿದಂತೆ ಬೆಂಗಳೂರಿನ ಕಡೆಗಳಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಿ ಗುರುವಾರ ರಾತ್ರಿಯೂ ಮಳೆ ಮುಂದುವರಿದಿತ್ತು.

ಒಟ್ಟಿನಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರು ನಗರದಲ್ಲಿ ಬೇಸಿಗೆ ಮಳೆಯಿಂದ ಗುರುವಾರ ಅನೇಕ ಕಡೆ ತುಸು ತೊಂದರೆಯಾಗಿದ್ದು ಮುಖ್ಯವಾಗಿ ಕಾಣಿಸಿತು.


Share It

You cannot copy content of this page