ಕೊಡಗು: ಕ್ರೂರತೆ ಮನುಷ್ಯನೊಳಗಿನ ಮೃಗವನ್ನು ಅದೆಷ್ಟು ಜಾಗೃತಗೊಳಿಸುತ್ತದೆ ಎಂಬುದಕ್ಕೆ ಇದು ಉದಾಹರಣೆ. ಮದುವೆ ಮುರಿದುಬಿದ್ದ ಕಾರಣಕ್ಕೆ ಯುವಕನೊಬ್ಬ ಬಾಲಕಿಯನ್ನು ಭೀಕರವಾಗಿ ಕೊಲೆಗೈದು ರುಂಡವನ್ನೇ ಕೊಂಡೊಯ್ದಿದ್ದಾನೆ.
೧೬ ವರ್ಷದ ಅಪ್ರಾಪ್ತ ಬಾಲಕಿಯ ಜತೆಗೆ ಯುವಕನ ನಿಶ್ಚಿತಾರ್ಥ ಮಾಡಲಾಗಿತ್ತು. ಬಾಲಕಿ ಅಪ್ರಾಪ್ತೆ ಎಂಬ ಕಾರಣಕ್ಕೆ ಪೊಲೀಸರು ಮಧ್ಯಪ್ರವೇಶ ಮಾಡಿ, ಮದುವೆಯನ್ನು ತಡೆದಿದ್ದರು. ಇದರಿಂದ ಮನನೊಂದ ಯುವಕ ಬಾಲಕಿಯನ್ನು ಎಳೆದೊಯ್ದು ಕತ್ತುಕೊಯ್ದು ಕೊಲೆ ಮಾಡಿರುವುದಲ್ಲದೆ, ಆಕೆಯ ರುಂಡವನ್ನು ತನ್ನೊಂದಿಗೆ ಕೊಂಡೊಯ್ದಿರುವ ಘಟನೆ ಜಿಲ್ಲೆಯ ಸೋಮವಾರಪೇಟೆಯ ಸುರ್ಲಬ್ಬಿಯಲ್ಲಿ ಗುರುವಾರ ನಡೆದಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ ಬಾಲಕಿಗೆ ನಿಶ್ಚಿತಾರ್ಥ ಮಾಡಿದ್ದ ಪೋಷಕರ ತೀರ್ಮಾನವನ್ನು ಪೊಲೀಸರು ತಪ್ಪೆಂದು ತಿಳಿಹೇಳಿ ಮದುವೆ ನಿಲ್ಲಿಸಿದ್ದರು. ಬಾಲಕಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶವೂ ನೆನ್ನೆ ಬಂದಿತ್ತು. ಆಕೆ ಉತ್ತಮ ಅಂಕಪಡೆದು ಪಾಸಾಗಿದ್ದಳು.
ಅದೇ ದಿನ ಬಾಲಕಿಯ ಮನೆಗೆ ಬಂದ ಯುವಕ, ಆಕೆಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಕತ್ತು ಸೀಳಿ ಕೊಲೆ ಮಾಡಿದ್ದಾನೆ. ದೇಹವನ್ನು ಅಲ್ಲೆ ಬಿಟ್ಟು ತಲೆಯನ್ನು ತನ್ನೊಂದಿಗೆ ತೆಗೆದುಕೊಂಡು ಪರಾರಿಯಾಗಿದ್ದಾನೆ.