ಬೆಂಗಳೂರು: ಇನ್ಮುಂದೆ ಸಾರಿಗೆ ಬಸ್ ಗಳ ಟಿಕೆಟ್ ದರ ಹೆಚ್ಚಳದ ವಿಷಯದಲ್ಲಿ ಸರಕಾರ ಮಧ್ಯಪ್ರವೇಶ ಮಾಡುವುದಿಲ್ಲ, ಸಧ್ಯಕ್ಕೆ ಟಿಕೆಟ್ ದರ ಹೆಚ್ಚಳದ ಪ್ರಸ್ತಾವನೆಯೂ ಇಲ್ಲ ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.
ಬಸ್ಸುಗಳ ಟಿಕೆಟ್ ದರ ಹೆಚ್ಚಳವಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿರುವ ಊಹಾಪೋಹಗಳಿಗೆ ಉತ್ತರ ನೀಡಿದ ಅವರು, ಟಿಕೆಟ್ ದರ ಇತ್ತೀಚೆಗಷ್ಟೇ ಮಾಡಿದ್ದೇವೆ. ಹೀಗಾಗಿ, ಮತ್ತೇ ಟಿಕೆಟ್ ದರ ಹೆಚ್ಚಿಸುವ ಪ್ರಸ್ತಾವನೆ ಸರಕಾರದ ಮುಂದಿಲ್ಲ. ಊಹಾಪೋಹದ ಸುದ್ದಿಗೆ ಜನ ಕಿವಿಗೊಡುವ ಅಗತ್ಯವಿಲ್ಲ ಎಂದು ಸಮಜಾಯಿಷಿ ನೀಡಿದರು.
ಇನ್ಮುಂದೆ ಟಿಕೆಟ್ ದರ ಹೆಚ್ಚಳದಲ್ಲಿ ಸರಕಾರ ಮಧ್ಯಪ್ರವೇಶ ಮಾಡುವುದಿಲ್ಲ. ಅದಕ್ಕಾಗಿ ಸಮಿತಿ ರಚನೆ ಮಾಡ್ತೇವೆ. ಸಮಿತಿಯು ಕಾಲಕಾಲಕ್ಕೆ ಸಂಸ್ಥೆಗಳ ಖರ್ಚುವೆಚ್ಚಗಳನ್ನು ಆಧರಿಸಿ ಟಿಕೆಟ್ ದರ ಹೆಚ್ಚಳ ಮಾಡಲಿದೆ. ಅದಕ್ಕೆ ಅಗತ್ಯ ಮಾನದಂಡಗಳನ್ನು ಅನುಸರಣೆ ಮಾಡಲಿದೆ ಎಂದರು.
ಕಾಲಕಾಲಕ್ಕೆ ದರ ಏರಿಕೆ ಮಾಡಿದರೆ ಸಮಸ್ಯೆಯಾಗುವುದಿಲ್ಲ. ಆದರೆ, 2014 ರಲ್ಲಿ ಬಿಎಂಟಿಸಿ ಮಾಡಿತ್ತು. ಈವರೆಗೆ ಆಗಿರಲಿಲ್ಲ. ಉಳಿದ ಸಂಸ್ಥೆಗಳು 2020 ರಲ್ಲಿ ಮಾಡಿದ್ದು, ಈವರೆಗೆ ಆಗಿರಲಿಲ್ಲ. ಸಂಸ್ಥೆಗಳ ಖರ್ಚುಗಳೆಲ್ಲ ಜಾಸ್ತಿಯಾಗುವ ಕಾರಣ ಆಗಾಗ ದರ ಏರಿಕೆ ಆಗಬೇಕು. ಸ್ವಲ್ಪ ಸ್ವಲ್ಪ ಏರಿಕೆ ಮಾಡಿದರೆ, ಜನರಿಗೂ ಏನು ಸಮಸ್ಯೆಯಾಗುವುದಿಲ್ಲ ಎಂದು ತಿಳಿಸಿದರು.
ಬಿಜೆಪಿ ಅಧಿಕಾರವಧಿಯಲ್ಲಿ ಬಸ್ ಖರೀದಿ, ಸಿಬ್ಬಂದಿ ನೇಮಕಾತಿ ಯಾವುದು ನಡೆದಿರಲಿಲ್ಲ. ಅದು ನಮಗೆ ಈಗ ಹೊರೆಯಾಗುತ್ತಿದೆ. ಅದರ ನಡುವೆಯೂ ನಾವು
ಹೊಸ ಬಸ್ ಸೇರ್ಪಡೆ ಮಾಡಿದ್ದೇವೆ. 10 ಸಾವಿರ ಸಿಬ್ಬಂದಿ ನೇಮಕ ಮಾಡಿದ್ದೇವೆ. ಒಂದು ವರ್ಷದಲ್ಲಿ 2,000 ಬಸ್ ಸೇರ್ಪಡೆ ಮಾಡಿಕೊಳ್ಳಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.

