ಬೆಂಗಳೂರು: “ಸಿದ್ದರಾಮಯ್ಯನವರು ಕುರ್ಚಿ ಬಿಟ್ಟು ಕೊಡುವ ಜಾಯಮಾನದವರಲ್ಲ. ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡಲ್ಲ. ಕುರ್ಚಿ ಬಿಡುವುದು ಅವರ ಜಾಯಮಾನದಲ್ಲಿಯೇ ಇಲ್ಲ” ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು, “ನಮ್ಮ ಪಕ್ಷದಲ್ಲೇ ಇದ್ದರಲ್ಲ, ನೋಡಿದ್ದೇನೆ ನಾನು. ರಾಜ್ಯದ ಜನತೆ ಸೇವೆ ಮಾಡಲು, ಅಹಿಂದ ಜನರಿಗಾಗಿ ಕೆಲಸ ಮಾಡಲು ಇವರು ಅಧಿಕಾರಕ್ಕೆ ಬಂದಿಲ್ಲ. ಅವರಿಗೆ ವೈಯಕ್ತಿಕ ಅಧಿಕಾರವೇ ಮುಖ್ಯ. ನಮ್ಮ ಪಕ್ಷದಲ್ಲಿ ಇದ್ದಾಗಲೂ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದರು. ಇವತ್ತು ಆಶ್ರಯ ಕೊಟ್ಟ ಪಕ್ಷವನ್ನೇ ಆವರಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಹಳಬರನ್ನು ಮೂಲೆಗುಂಪು ಮಾಡಿದ್ದಾರೆ. ನಾನು ಇದ್ದರೆ ಕಾಂಗ್ರೆಸ್, ನಾನು ಇಲ್ಲ ಅಂದರೆ ಕಾಂಗ್ರೆಸ್ ಇಲ್ಲ ಎನ್ನುವ ವಾತಾವರಣ ನಿರ್ಮಾಣ ಮಾಡಿದ್ದಾರೆ. ಈ ಮೂಲಕ ಸಿಎಂ ಸ್ಥಾನ ಬಿಡಲು ಆಗಲ್ಲ ಎನ್ನುವ ಹೊಸ ಅಸ್ತ್ರ ಪ್ರಯೋಗ ಮಾಡಿದ್ದಾರೆ” ಎಂದು ಪ್ರತಿಕ್ರಿಯಿಸಿದರು.
“ಸಾಮಾಜಿಕ ನ್ಯಾಯದ ನೆಪದಲ್ಲಿ ಕುರ್ಚಿ ಉಳಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿಯನ್ನು ಎಳೆದು ತರುವುದು ಸರಿಯಲ್ಲ. ಸಿದ್ದರಾಮಯ್ಯ ಅವರು ಒಂದು ಸಮುದಾಯದ ಬೆಂಬಲದಿಂದ ಅಷ್ಟೇ ಸಿಎಂ ಆಗಿದ್ದಲ್ಲ. ರಾಜ್ಯದ ಎಲ್ಲಾ ಸಮುದಾಯಗಳು ಬೆಂಬಲಿಸಿವೆ ಎಂಬುದನ್ನು ಮರೆಯಬಾರದು. ಅವರು ಹಣಕಾಸು ಸಚಿವರಾದಾಗ, ಡಿಸಿಎಂ ಆದಾಗ ಯಾವೆಲ್ಲಾ ಸಮುದಾಯಗಳು ಬೆಂಬಲ ನೀಡಿದ್ದವು ಎಂಬುದು ಗೊತ್ತಿಲ್ಲವೇ? ಅವರಿಗೆ ರಾಜಕೀಯ ಶಕ್ತಿ ತುಂಬಿದವರು ಅವರ ಸಮುದಾಯಕ್ಕೆ ಸೇರಿದವರೇ?” ಎಂದು ಖಾರವಾಗಿ ಪ್ರಶ್ನಿಸಿದರು.
“ತಮ್ಮ ಜಾತಿಯನ್ನು ಎಳೆದು ತರುವ ಮೂಲಕ ಸಿದ್ದರಾಮಯ್ಯನವರು ಕಾಂಗ್ರೆಸ್ ಅವರಿಗೆ ಸಂದೇಶ ಕೊಟ್ಟಿದ್ದಾರೋ? ಅಥವಾ ಸಿಎಂ ಸ್ಥಾನ ತೆಗೆಯಲು ನಿಂತಿರುವವರಿಗೆ ಸಂದೇಶ ಕೊಟ್ಡಿದ್ದಾರೋ ಗೊತ್ತಿಲ್ಲ. ಇಂತಹ ಸಮಯದಲ್ಲಿ ಅವರು ತಾವು ಹುಟ್ಟಿದ ಸಮಾಜವನ್ನು ಎಳೆದು ತರುವುದು ಯಾವ ಮಟ್ಟಕ್ಕೆ ಸರಿ? ಇದು ಅವರ ಹೃದಯದ ಭಾವನೆ ಎಂತಹುದು ಎಂಬುದು ಗೊತ್ತಾಗುತ್ತದೆ” ಎಂದು ಬೇಸರ ವ್ಯಕ್ತಪಡಿಸಿದರು.

