ಬೆಳಗಾವಿ:ಪತ್ನಿ ಮೇಲೆ ನ್ಯಾಯಾಲಯದ ಆವರಣದಲ್ಲೇ ದಾಳಿ ಮಾಡಿ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪತಿಗೆ ಬೆಳಗಾವಿಯ 9ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಿದೆ.
ಬೈಲಹೊಂಗಲ ತಾಲೂಕಿನ ನನಗುಂಡಿಕೊಪ್ಪ ಗ್ರಾಮದ ನಿವಾಸಿ ಶಿವಪ್ಪ ನಿಂಗಪ್ಪ ಅಡಕಿ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಪತ್ನಿ ಜಯಮಾಲಾ ಮತ್ತು ಶಿವಪ್ಪ ಅಡಕಿ ನಡುವೆ ದಾಂಪತ್ಯ ಕಲಹ ಉಂಟಾಗಿ ಬೈಲಹೊಂಗಲ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿ, 2021ರ ಅಕ್ಟೋಬರ್ 29ರಂದು ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಕೋರ್ಟ್ ಕ್ಯಾಂಟೀನ್ ಬಳಿ ಶಿವಪ್ಪ ಪತ್ನಿ ಜಯಮಾಲಾ ಮೇಲೆ ಮಚ್ಚಿನಿಂದ ದಾಳಿ ನಡೆಸಿ, ಕೊಲೆಗೆ ಯತ್ನಿಸಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿತ್ತು.
ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖಾಧಿಕಾರಿ ನ್ಯಾಯಾಲಯಕ್ಕೆ ದೋಷಾರೋಪ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸುಭಾಷ ಸಂಕದ, ಆರೋಪ ಸಾಬೀತಾಗಿದೆ ಎಂದು ಪರಿಗಣಿಸಿ, ಭಾರತೀಯ ದಂಡ ಸಂಹಿತೆ ಕಲಂ 307ರಡಿ ಶಿಕ್ಷೆ ಹಾಗೂ ದಂಡದ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೃಷ್ಣಾ ನಾರಾಯಣ ಪಾಟೀಲ ವಕಾಲತ್ತು ವಹಿಸಿದ್ದರು.

