ಬೆಂಗಳೂರು: ಬಿಬಿಎಂಪಿಯ ನಿವೃತ್ತ ಮುಖ್ಯ ಇಂಜಿನಿಯರ್ ಪರಮೇಶ್ವರಯ್ಯ (63) ಅವರು ಕೋರಮಂಗಲದ 4ನೇ ಬ್ಲಾಕ್‌ನಲ್ಲಿರುವ ತಮ್ಮ ನಿವಾಸದಲ್ಲಿ ಇಂದು(ಬುಧವಾರ) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್ ಬರೆದಿಟ್ಟಿದ್ದು, ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಕೋರಮಂಗಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪತ್ನಿ, ಪುತ್ರನೊಂದಿಗೆ ಪರಮೇಶ್ವರಯ್ಯ ವಾಸವಿದ್ದರು. ಇಬ್ಬರು ಮಕ್ಕಳ ಪೈಕಿ ಒಬ್ಬ ಮಗ ವೈದ್ಯನಾಗಿದ್ದು ಮತ್ತೊಬ್ಬ ಮಗ ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಬಿಬಿಎಂಪಿಯ ಮಹದೇವಪುರ ವಲಯದಲ್ಲಿ ಮುಖ್ಯ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿ ಪರಮೇಶ್ವರಯ್ಯ ನಿವೃತ್ತರಾಗಿದ್ದರು.
ಭ್ರಷ್ಟಾಚಾರದ ಆರೋಪದಡಿ ಕೆಲ ದಿನಗಳ ಹಿಂದಷ್ಟೇ ಅವರ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ದಾಳಿಯ ಬಳಿಕ ತೀವ್ರವಾಗಿ ನೊಂದಿದ್ದ ಪರಮೇಶ್ವರಯ್ಯ ಹೆಚ್ಚು ಮೌನವಾಗಿರುತ್ತಿದ್ದರು ಎನ್ನಲಾಗಿದೆ. ದಾಳಿ ಸಂಬಂಧ ನೀಡಿದ್ದ ನೋಟಿಸ್‌ಗೆ ಇಂದು ಆರ್.ಟಿ.ನಗರದ ಸಿಬಿಐ ಕಚೇರಿಗೆ ಅವರು ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಬೆಳಿಗ್ಗೆ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆತ್ಮಹತ್ಯೆಗೆ ಮುನ್ನ ಪರಮೇಶ್ವರಯ್ಯ 1 ಪುಟದ ಡೆತ್‌ನೋಟ್ ಬರೆದಿಟ್ಟಿದ್ದು, ಅದು ದೊರೆತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. “ನನ್ನ ಸಾವಿಗೆ ಯಾರೂ ಕಾರಣರಲ್ಲ. ನಾನೇ ಕಾರಣ. ಯಾರಿಗೂ ತೊಂದರೆ ಕೊಡಬೇಡಿ, ನನ್ನ ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಎಂದು ಡೆತ್‌ನೋಟ್ ಬರೆದಿಟ್ಟಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

