ಉಪಯುಕ್ತ ಸುದ್ದಿ

ವಿದ್ಯಾರ್ಥಿಗಳಿಗೆ ಶಿಸ್ತು–ಸಮಯಪ್ರಜ್ಞೆ ಅಗತ್ಯ : ಸಿಆರ್‌ಪಿ ಶ್ರೀನಿವಾಸ್

Share It

ವರದಿ: ನಾರಾಯಣಸ್ವಾಮಿ ಸಿ.ಎಸ್

ಹೊಸಕೋಟೆ : ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಸಮಯಪ್ರಜ್ಞೆ ಬಹಳ ಮುಖ್ಯವಾಗಿದ್ದು, ನಿರಂತರ ಅಧ್ಯಯನದಿಂದ ಮಾತ್ರ ಗುರಿ ತಲುಪಲು ಸಾಧ್ಯ. ಸಾಧನೆಗೆ ಶ್ರದ್ಧೆ, ಸಂಯಮ ಹಾಗೂ ಕಠಿಣ ಪರಿಶ್ರಮ ಅಗತ್ಯ ಎಂದು ಸಿಆರ್‌ಪಿ ಶ್ರೀನಿವಾಸ್ ಹೇಳಿದರು.

ತಾಲೂಕಿನ ಮಾಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಏಳನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಂದಿನ ಮಕ್ಕಳು ಮೊಬೈಲ್‌ಗಳಿಂದ ದೂರವಿದ್ದು ವಿದ್ಯಾಭ್ಯಾಸದತ್ತ ಗಮನ ಹರಿಸಬೇಕು. ಹೆಚ್ಚಿನ ವಿದ್ಯಾಭ್ಯಾಸದಿಂದಲೇ ಮುಂದಿನ ಜೀವನದಲ್ಲಿ ಸಾಧನೆ ಸಾಧ್ಯ. ಶಿಕ್ಷಣದ ಜ್ಞಾನವೇ ಬೆಳಕಿನ ಶಕ್ತಿಯಾಗಿದ್ದು, ಶ್ರದ್ಧಾಭಕ್ತಿಯಿಂದ ವ್ಯಾಸಂಗ ಮಾಡಿ ಗುರಿ ತಲುಪಿ ತಂದೆ-ತಾಯಿಗಳು ಹಾಗೂ ಗುರುಹಿರಿಯರಿಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.

ಅತಿಥಿ ಶಿಕ್ಷಕ ಬಾಬು ಪ್ರಕಾಶ್ ಮಾತನಾಡಿ, ಪ್ರಾಥಮಿಕ ಹಂತದಲ್ಲಿ ಕಲಿತ ಜ್ಞಾನವೇ ಮುಂದಿನ ವಿದ್ಯಾಭ್ಯಾಸಕ್ಕೆ ಬಲವಾಗುತ್ತದೆ. ಪ್ರಾಥಮಿಕ ಜ್ಞಾನವನ್ನು ಸರಿಯಾದ ಸಮಯದಲ್ಲಿ ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಯಶಸ್ಸಿನತ್ತ ಸಾಗಬೇಕು. ಏಳನೇ ತರಗತಿ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಕಠಿಣ ಪರಿಶ್ರಮದಿಂದ ಗುರುಗಳು ಹಾಗೂ ಪೋಷಕರಿಗೆ ಕೀರ್ತಿ ತರುವಂತವರಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷೆ ಭಾಗ್ಯಲಕ್ಷ್ಮಿ, ಉಪಾಧ್ಯಕ್ಷ ರವಿ, ಗ್ರಾಮ ಪಂಚಾಯಿತಿ ಸದಸ್ಯ ರಾಮಚಂದ್ರಪ್ಪ, ಮುಖ್ಯಶಿಕ್ಷಕಿ ಲೀಲಾ, ಶಿಕ್ಷಕರಾದ , ಮಹಾಂತೇಶ್, ಹೇಮಲತಾ, ಪೋಷಕರಾದ ಚಿಕ್ಕೇಗೌಡ, ಭಾರತಿ, ನಾಗೇಶ್ ಉಪಸ್ಥಿತರಿದ್ದರು.


Share It

You cannot copy content of this page