ಉಪಯುಕ್ತ ಸುದ್ದಿ

ರಾಮನಗರದ ಪ್ರಯಾಣಿಕರಿಗೆ ಗುಡ್ ನ್ಯೂಸ್ : ರಾಮನಗರ, ಚನ್ನಪಟ್ಟಣಕ್ಕೆ ಬಂತು BMTC ಎಸಿ ಬಸ್

Share It

ಬೆಂಗಳೂರು ದಕ್ಷಿಣ: ರಾಮನಗರ ಜನರ ಬಹು ದಿನದ ಕನಸು ನನಸಾಗಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಹವಾನಿಯಂತ್ರಿತ ವಜ್ರ ವಿಸ್ತಾರ ಬಸ್‌ಗಳು ರಾಮನಗರ ಮತ್ತು ಚನ್ನಪಟ್ಟಣಕ್ಕೆ ಆಗಮಿಸಿವೆ.

ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರು ಆರು ಹೊಸ ಎಸಿ ಬಸ್‌ಗಳಿಗೆ ಚಾಲನೆ ನೀಡಿ ಈ ಸೇವೆಯನ್ನು ಔಪಚಾರಿಕವಾಗಿ ಆರಂಭಿಸಿದ್ದಾರೆ. ಇದು ರಾಮನಗರ ಭಾಗದ ಜನರ ಸಂಚಾರಕ್ಕೆ ಮತ್ತಷ್ಟು ಆರಾಮ ನೀಡಿದೆ.

ಈ ಕುರಿತು ಮಾತನಾಡಿರುವ ಸಾರಿಗೆ ಸಚಿವರು, ರಾಮನಗರ ಜನರ ಬಹುದಿನದ ಬೇಡಿಕೆ ಈಡೇರಿದೆ. ಬೆಂಗಳೂರು ಮಹಾನಗರ ವ್ಯಾಪ್ತಿಯಿಂದ ಹೊರಗಿನ 25 ಕಿ.ಮೀ. ಗೆ ಬಿಎಂಟಿಸಿ ಬಸ್ ಓಡಿಸಲಾಗುತ್ತಿತ್ತು. ಅದನ್ನು ಬೋರ್ಡ್ ಮುಂದಿಟ್ಟು 40 ಕಿ.ಮಿ.ಗೆ ವಿಸ್ತರಣೆ ಮಾಡಲಾಗಿದೆ. ಹೀಗಾಗಿ, ರಾಮನಗರಕ್ಕೆ ಬಿಎಂಟಿಸಿ ಬಸ್ ಓಡಿಸಲಾಗುತ್ತಿದೆ ಎಂದು ತಿಳಿಸಿದರು.

ಬಿಎಂಟಿಸಿ ಎಸಿ ಬಸ್ ಗಳ ಓಡಾಟದಿಂದ ಈ ಭಾಗದ ಜನರಿಗೆ ಸುಲಭದ ಪ್ರಯಾಣ ಸಾಧ್ಯವಾಗಲಿದೆ. ಪ್ರಸ್ತುತ ಆರು ಬಸ್ ಗಳನ್ನು ಓಡಿಸಲಾಗುತ್ತಿದ್ದು, ಅಗತ್ಯತೆ ಪರಿಗಣಿಸಿ ಹೆಚ್ವು ಬಸ್ ನೀಡುವ ಕುರಿತು ಚಿಂತನೆ ನಡೆಸಲಾಗುತ್ತದೆ. ಜನರಿಗೆ ಅನುಕೂಲ ಕಲ್ಪಿಸುವುದು ಮಾತ್ರವೇ ನಮ್ಮ ಜವಾಬ್ದಾರಿ ಎಂದು ತಿಳಿಸಿದರು.

ಹಸಿರು ಬಾವುಟ ತೋರುವ ಮೂಲಕ ಬಸ್ ಗಳ ಓಡಾಟಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಅವರು ಚಾಲನೆ ನೀಡಿದರು. ಈ ವೇಳೆ ಶಾಸಕ ಇಕ್ಬಾಲ್ ಹುಸೇನ್, ಬಿಎಂಟಿಸಿ ಅಧ್ಯಕ್ಷ ಎಸ್.ವಿ.ಆರಾಧ್ಯ, ಉಪಾಧ್ಯಕ್ಷ ನಿಕೇತ್ ಮೌರ್ಯ ಹಾಗೂ ಮುಖಂಡರು ಮತ್ತು ಬಿಎಂಟಿಸಿ ಅಧಿಕಾರಿಗಳು ಭಾಗವಹಿಸಿದ್ದರು.


Share It

You cannot copy content of this page