ಮಂಡ್ಯ: ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಕೈಗಾರಿಕೆಗಳನ್ನು ತರುವ ಕೆಲಸ ಪ್ರಗತಿಯಲ್ಲಿದ್ದು, ಅದಷ್ಟು ಬೇಗ ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಪರೀಕ್ಷಾ ಕೇಂದ್ರ ತರುವ ಕೆಲಸ ಪ್ರಗತಿಯಲ್ಲಿದೆ. ಜಾಗ ಹಂಚಿಕೆ ಪತ್ರ ನಮ್ಮ ಕೈ ಸೇರಿದ ಕೂಡಲೇ ಕೇಂದ್ರದ ಪರಿಣಿತರ ತಂಡ ಮಂಡ್ಯ ಜಿಲ್ಲೆಗೆ ಬಂದು ಪರಿಶೀಲನೆ ನಡೆಸಲಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ವಿಸಿ ಫಾರಂನಲ್ಲಿ ₹14 ಕೋಟಿ ವೆಚ್ಚದ ಒಳಾಂಗಣ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಬೇಡಿಕೆ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು. ನಾನು ಮಾತು ಕೊಟ್ಟಿದ್ದೇನೆ, ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆ. ARAI ಪರೀಕ್ಷಾ ಕೇಂದ್ರದ ಕೆಲಸಗಳು ದೆಹಲಿ ಮಟ್ಟದಲ್ಲಿ ವೇಗದಿಂದ ನಡೆಯುತ್ತಿವೆ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಅವರು ನುಡಿದರು.
ಮಂಡ್ಯದಲ್ಲಿ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ಬೇಕು ಎಂಬುದು ಬಹುದಿನಗಳ ಬೇಡಿಕೆ. ಅದನ್ನು ಈಡೇರಿಸುತ್ತಿದ್ದೇವೆ. ಈಗ ಭೂಮಿಪೂಜೆ ನೆರವೇರಿಸಲಾಗಿದೆ. ಅತಿ ಶೀಘ್ರದಲ್ಲಿಯೇ ಕಾಮಗಾರಿ ಶುರುವಾಗಲಿದೆ. ಹಾಗೆಯೇ ಅಷ್ಟೇ ವೇಗವಾಗಿ ಕಾಮಗಾರಿಯನ್ನು ಮುಗಿಸಲಾಗುವುದು ಎಂದು ಕೇಂದ್ರ ಸಚಿವರು ಹೇಳಿದರು.
ತಮ್ಮ ಮನವಿಯನ್ನು ಪುರಸ್ಕರಿಸಿ ಖೇಲೋ ಇಂಡಿಯಾ ಯೋಜನೆ ಅಡಿಯಲ್ಲಿ ಒಳಾಂಗಣ ಕ್ರೀಡಾಂಗಣಕ್ಕೆ ಮಂಜೂರಾತಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಕೇಂದ್ರದ ಕ್ರೀಡಾ ಸಚಿವರಾದ ಮನ್ಸೂಖ್ ಮಾಂಡವಿಯಾ ಅವರಿಗೆ ಧನ್ಯವಾದ ತಿಳಿಸುತ್ತೇನೆ. ನನ್ನ ಮನವಿಗೆ ಸ್ಪಂದಿಸಿ ಮಂಡ್ಯ ಜಿಲ್ಲೆಗೆ ಖೇಲೋ ಇಂಡಿಯಾ ಯೋಜನೆಯಡಿ ಸ್ಟೇಡಿಯಂ ನೀಡಿದ್ದಾರೆ. ಅವರ ಕಾಳಜಿಯನ್ನು ನಾನು ಮರೆಯಲಾರೆ ಎಂದು ಕೇಂದ್ರ ಸಚಿವರು ಹೇಳಿದರು.
ಟಿಸಿಎಸ್, ಉಕ್ಕು ಸಚಿವಾಲಯದ ಅಧೀನದಲ್ಲಿರುವ ಭಾರತೀಯ ಉಕ್ಕು ಪ್ರಾಧಿಕಾರ (SAIL), ಇನ್ಫೋಸಿಸ್, ಹಿಂದೂಜಾ, ಹೆಚ್ ಎಂಟಿ ಸೇರಿದಂತೆ ಹಲವಾರು ಕಂಪನಿಗಳು ತಮ್ಮ ಸಿಎಸ್‌ಆರ್ ನಿಧಿಯಲ್ಲಿ ಅನುದಾನ ನೀಡಿವೆ. ಆ ಮೂಲಕ
380ಕ್ಕೂ ವಿಕಲಚೇತನ ಫಲಾನುಭವಿಗಳಿಗೆ ಎಲೆಕ್ಟ್ರಿಕ್ ವಾಹನಗಳು, ಮಂಡ್ಯದ 600 ಶಾಲೆಗಳಿಗೆ ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ಹಾಗೂ ಮಂಡ್ಯದ ಮಿಮ್ಸ್ ಗೆ ಸುಸಜ್ಜಿತ ಆಂಬ್ಯುಲೆನ್ಸ್ ನೀಡಲಾಗಿದೆ. ಕಾರ್ಪೊರೇಟ್ ಕಂಪನಿಗಳು ತಮ್ಮ ಸಾಮಾಜಿಕ ಕಳಕಳಿಯನ್ನು ತೋರಿಸಿವೆ ಎಂದು ಕೇಂದ್ರ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಯುವಜನ ಸಬಲೀಕರಣಕ್ಕೆ ನರೇಂದ್ರ ಮೋದಿ ಅವರ ಸರಕಾರ ಅತಿಹೆಚ್ಚು ಆದ್ಯತೆ ನೀಡಿ ಕೆಲಸ ಮಾಡುತ್ತಿದೆ. ಪ್ರತಿ ಸಂಪುಟ ಸಭೆಯಲ್ಲಿ ಯುವಜನರ ಕಲ್ಯಾಣಕ್ಕೆ ಪ್ರಧಾನಿಗಳು ಅಗತ್ಯ ಮಾರ್ಗದರ್ಶನ ನೀಡುತ್ತಿದ್ದಾರೆ. ಅವರ ಸೂಚನೆಗಳನ್ನು ಮನ್ಸೂಖ್ ಮಾಂಡವಿಯಾ ಅವರು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುತ್ತಿದ್ದಾರೆ ಎಂದು ಕೇಂದ್ರ ಸಚಿವರು ನುಡಿದರು.
ಮಂಡ್ಯಕ್ಕೆ ಅನೇಕ ಕಾರ್ಯಕ್ರಮಗಳನ್ನು ಕೊಡಲಾಗುತ್ತಿದೆ. ಈಗಾಗಲೇ ಸಿಎಸ್ಆರ್ ಅನುದಾನದಡಿ 96 ಶಾಲೆಗಳ ನವೀಕರಣಕ್ಕೆ ಅನುದಾನ ನೀಡಲಾಗಿದೆ. ನಿಮ್ಮೆಲ್ಲರ ನಿರೀಕ್ಷೆ ಹುಸಿಗೊಳಿಸದೆ ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ನನ್ನ ಇಲಾಖೆಯಿಂದಲೇ ಆಗುತ್ತಿದ್ದು, ARAI ಘಟಕ ಸ್ಥಾಪನೆ ಆಗಲಿದೆ. ಮಂಡ್ಯ ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳ ಯುವಜನರಿಗೆ ಉದ್ಯೋಗ ಸಿಗಲಿದೆ ಎಂದು ಅವರು ಹೇಳಿದರು.

