ಬೆಂಗಳೂರು: ದೇಶದಲ್ಲಿ ಗ್ಯಾಸ್ ಟ್ರಬಲ್ ಶುರುವಾಗುತ್ತಿದ್ದಂತೆ ಕಾಳದಂಧೆಕೋರರ ಹಾವಳಿ ಹೆಚ್ಚಾಗಿದ್ದು, ಅಕ್ರಮವಾಗಿ ಗ್ಯಾಸ್ ಸಂಗ್ರಹಿಸಿ ರಿ-ಫಿಲ್ಲಿಂಗ್ ಮಾಡುತ್ತಿದ್ದ ಅಂಗಡಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ರಾಜ್ಯಾದ್ಯಂತ ನಡೆದ ದಾಳಿಯಲ್ಲಿ ಸುಮಾರು ೩೧೬ ಸಿಲೀಂಡರ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೆಂಗಳೂರು, ಮೈಸೂರು, ವಿಜಯಪುರ, ಹುಬ್ಬಳ್ಳಿ ಮತ್ತು ರಾಯಚೂರು ಸೇರಿದಂತೆ ವಿವಿಧ ನಗರಗಳಲ್ಲಿ ದಾಳಿ ನಡೆಸಲಾಗಿದೆ.
ಕೊಲ್ಲಿಯಲ್ಲಿ ಯುದ್ದದ ಪರಿಸ್ಥಿತಿಯಿಂದಾಗಿ ದೇಶದಲ್ಲಿ ಗ್ಯಾಸ್ ಸಮಸ್ಯೆಯುಂಟಾಗಬಹುದು ಎಂಬ ಮುಂದಾಲೋಚನೆಯಿAದ ಅಕ್ರಮವಾಗಿ ಗ್ಯಾಸ್ ಸಂಗ್ರಹಿಸುವ ಪ್ರಕ್ರಿಯೆ ಚಾಲ್ತಿಯಾಗಿದೆ. ಈಗಾಗಲೇ ಹೊಟೇಲ್, ದೇವಸ್ಥಾನಗಳಲ್ಲಿ ಗ್ಯಾಸ್ ಕೊರತೆ ಕಾಡುತ್ತಿದ್ದು, ಇದನ್ನು ದುರುಪಯೋಗ ಪಡಿಸಿಕೊಂಡು ಹೆಚ್ಚಿನ ಬೆಲೆಗೆ ಗ್ಯಾಸ್ ತುಂಬಿಸಲಾಗುತ್ತಿದೆ.
ಅಕ್ರಮ ಗ್ಯಾಸ್ ಸಿಲೀಂಡರ್ ಸಂಗ್ರಹ ಮತ್ತು ರಿ-ಫಿಲ್ಲಿಂಗ್ ಪ್ರಕ್ರಿಯೆಯಿಂದಾಗಿ ರಾಜ್ಯದಲ್ಲಿ ಗ್ಯಾಸ್ ಸಿಲೀಂಡರ್ ಕೊರತೆ ಕಾಡಲಿದ್ದು, ಇದು ಮುಂದಿನ ದಿನಗಳಲ್ಲಿ ಆತಂಕಕ್ಕೆ ಕಾರಣವಾಗಲಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೇಂದ್ರ ಸರಕಾರದ ಮಾರ್ಗಸೂಚಿಯ ಅನ್ವಯ ಸಿಲೀಂಡರ್ ವಿತರಣೆ ವ್ಯವಸ್ಥೆಯನ್ನು ರೂಪಿಸಲು ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿ, ಅಕ್ರಮವಾಗಿ ಗ್ಯಾಸ್ ಫಿಲ್ಲಿಂಗ್ ಮಾಡುತ್ತಿದ್ದ ಸಿಲೀಂಡರ್ ವಶಕ್ಕೆ ಪಡೆದಿದ್ದಾರೆ.

