ಸುದ್ದಿ

ಕರವೇ ಹೋರಾಟಕ್ಕೆ ಮಣಿದ ರೈಲ್ವೆ ಇಲಾಖೆ: ಪದೋನ್ನತಿ ಪರೀಕ್ಷೆ ದಿಢೀರ್​​ ‌ಮುಂದೂಡಿಕೆ

Share It

ಹುಬ್ಬಳ್ಳಿ: ರೈಲ್ವೆ ಇಲಾಖೆ ಪರೀಕ್ಷೆಯಲ್ಲಿ ಕನ್ನಡಿಗರಿಗೆ ಅನ್ಯಾಯ ಆಗುತ್ತಿದೆ ಎಂಬ ಕನ್ನಡ ಪರ ಸಂಘಟನೆಗಳ ಹೋರಾಟಕ್ಕೆ ಮಣಿದ ನೈರುತ್ಯ ರೈಲ್ವೆ ಇಲಾಖೆ ಪರೀಕ್ಷೆಯನ್ನು ದಿಢೀರ್​ ಮುಂದೂಡಿದೆ.

ಈಗಾಗಲೇ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ನೂರಾರು ಯುವಕ-ಯುವತಿಯರ ಪದೋನ್ನತಿಗಾಗಿ ನಡೆಯುತ್ತಿರುವ ಪರೀಕ್ಷೆ‌‌ ಇದಾಗಿದೆ. ಕಂಪ್ಯೂಟರ್ ಬೇಸ್ಡ್​ ಟೆಸ್ಟ್ (CBT) ನಡೆಯುವ ಪರೀಕ್ಷೆಯಾಗಿದ್ದು, ಎರಡು ಗಂಟೆಗಳ ಕಾಲ ಪರೀಕ್ಷೆ ನಡೆಯಬೇಕಿತ್ತು. ಆದರೆ ಕನ್ನಡದಲ್ಲಿ ‌ಪರೀಕ್ಷೆ ಬರೆಯಲು ಅವಕಾಶ ಇಲ್ಲದ್ದನ್ನು ಖಂಡಿಸಿ ಕನ್ನಡ ಪರ ಸಂಘಟನೆಳು ಪರೀಕ್ಷಾ ಕೇಂದ್ರಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ನೈರುತ್ಯ ರೈಲ್ವೆ ಗೂಡ್ಸ್ ರೈಲು ಮ್ಯಾನೇಜರ್ ಹಾಗೂ ಎಲ್ ಡಿಸಿಇ ಹುದ್ದೆಗಳ ಪರೀಕ್ಷೆ ಇತ್ತು. ಕರವೇ ನಾರಾಯಣಗೌಡ ಬಣ ಕೇಶ್ವಾಪುರದಲ್ಲಿನ ಪರೀಕ್ಷಾ ಕೇಂದ್ರಗಳಿಗೆ ಮುತ್ತಿಗೆ ಹಾಕಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕೆಂದು ಪಟ್ಟು ಹಿಡಿದರು. ರೈಲ್ವೆ ಇಲಾಖೆ ನಿರಂತರ ಅನ್ಯಾಯ ಮಾಡುತ್ತಾ ಬಂದಿದೆ. ಈಗ ಮತ್ತೆ ಕನ್ನಡಿಗರಿಗೆ ದ್ರೋಹ ಎಸಗುವಂತ ಕೆಲಸ ಮಾಡಿದೆ. ಇವತ್ತು ನಡೆಯುವ ಪರೀಕ್ಷೆ ರದ್ದು ಮಾಡಬೇಕು. ಮರುಪರೀಕ್ಷೆ ನಡೆಸಿ ಕನ್ನಡದಲ್ಲಿ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದರು.

ರೈಲ್ವೆ ಇಲಾಖೆಯ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅವಕಾಶಕ್ಕಾಗಿ ನಡೆಯುತ್ತಿರುವ ಪ್ರತಿಭಟನೆಯಿಂದ ಮಣಿದ ರೈಲ್ವೆ ಇವತ್ತು ನಡೆಯುತ್ತಿರುವ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಿದೆ. ಪರೀಕ್ಷೆಗಳನ್ನು ರದ್ದು ಮಾಡಿ ಆರ್‌ಸಿಸಿ ಚೇರ್ಮನ್ ಆಸೀಫ್ ಅನ್ಸಾರಿ, ಆರ್‌ಆರ್‌ಸಿ ಚೇರ್ಮನ್ (ರೈಲ್ವೆ ನೇಮಕಾತಿ ಸೆಲ್) ಆದೇಶ ಹೊರಡಿಸಿದ್ದಾರೆ.

ಪದೋನ್ನತಿ ಪರೀಕ್ಷೆ ಮುಂದೂಡಿಕೆಯಿಂದ ಪರೀಕ್ಷೆ ಬರೆಯಲು ಬಂದ ಅಭ್ಯರ್ಥಿಗಳನ್ನು ವಾಪಸ್​ ಕಳುಹಿಸಿದರು.
ಮುಂದಿನ ಪರೀಕ್ಷೆ ದಿನಾಂಕವನ್ನು ತಿಳಿಸೋದಾಗಿ ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದು, ಕನ್ನಡದಲ್ಲಿ ಪರೀಕ್ಷೆ ಬಗ್ಗೆ ನಿರ್ಧಾರವನ್ನು ಮೇಲಾಧಿಕಾರಿಗಳು ತೆಗೆದುಕೊಳ್ಳುತ್ತಾರೆ ಅಂತ ರೈಲ್ವೆ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.


Share It

You cannot copy content of this page