ರಾಜಕೀಯ ಸುದ್ದಿ

ಬೆಳಗಾವಿ ಮೇಯರ್, ಉಪಮೇಯರ್ ಹುದ್ದೆಗೆ ಕನ್ನಡಿಗರ ಆಯ್ಕೆ : ಮುಗಿಲು ಮುಟ್ಟಿದ ಹರ್ಷ

Share It

ಬೆಳಗಾವಿ : ದಶಕಗಳ ಹಿಂದಿ ಕನ್ನಡಿಗರ ಪಾಲಿಗೆ ಕಗದ ಕುಸುಮವಾಗಿ ಉಳಿದಿದ್ದ ಬೆಳಗಾವಿಯ ಮೇಯರ್ ಹಾಗೂ ಉಪಮೇಯರ್ ಹುದ್ದೆಗಳು ಇದೀಗ ಕನ್ನಡಿಗರೇ ಅಲಂಕರಿಸುವ ಕಾಲ ಬಂದಿದೆ. ಎರಡು ಪ್ರತಿಷ್ಠಿತ ಹುದ್ದೆಗಳು ಕನ್ನಡಿಗರ ಪಾಲಾಗಿವೆ.
ಬೆಳಗಾವಿ ಮಹಾನಗರ ಪಾಲಿಕೆಗೆ ಮೇಯರ್ ಸ್ಥಾನಕ್ಕೆ ಪ್ರೀತಿ ಕಾಮಕರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಹನುಮಂತ ಕೊಂಗಾಲಿ ಆಯ್ಕೆ ಆಗಿದ್ದಾರೆ.

ನೇಕಾರ ಸಮುದಾಯದ ಸದಸ್ಯೆ ಬಿಜೆಪಿಯ ಪ್ರೀತಿ ವಿನಾಯಕ ಕಾಮಕರ ಹಾಗೂ ಲಿಂಗಾಯತ ಸಮುದಾಯದ ಹನುಮಂತ ಕೊಂಗಾಲಿ ಅವರು ಸಹ ಬಿಜೆಪಿಯವರು.

ಬಿಜೆಪಿಯ ಪ್ರೀತಿ ಕಾಮಕರ ಅವರು 39 ಮತ ಪಡೆದು ಗೆಲುವು ಸಾಧಿಸಿದರು. ಕಾಂಗ್ರೆಸಿನ ಖುರ್ಷಿದಾ ದಾದಾಫೀರ ಮುಲ್ಲಾ 29 ಮತ ಪಡೆದು ಸೋಲು ಕಂಡು. ಉಪಮೇಯರ್ ಆಗಿ ಆಯ್ಕೆಯಾದ ಹನುಮಂತ ಕೊಂಗಾಲಿ 39 ಮತ ಪಡೆದರೆ, ಕಾಂಗ್ರೆಸಿನ ಮೋದಿನಸಾಬ್ ಮತವಾಲೆ 20 ಮತ ಪಡೆದು ಸೋಲು ಅನುಭವಿಸಿದರು.

ಚುನಾವಣಾ ಪ್ರಕ್ರಿಯೆಯನ್ನು ಬೆಳಗಾವಿ ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎ. ನಡೆಸಿಕೊಟ್ಟರು.

24 ನೇ ಅವಧಿ : ಬೆಳಗಾವಿ ಮಹಾನಗರ ಪಾಲಿಕೆಯ 24ನೇ ಅವಧಿಗೆ ಮೇಯರ್, ಉಪ ಮೇಯರ್ ಆಯ್ಕೆ ಇದಾಗಿದೆ.

ಕೋರ್ ಕಮಿಟಿ ಸಭೆ ನಡೆಸಿ ಮೇಯರ್, ಉಪಮೇಯರ್ ಸ್ಥಾನಗಳಿಗೆ ಹೆಸರು ಅಂತಿಮಗೊಳಿಸಲಾಯಿತು.

ಶಾಸಕ ಅಭಯ ಪಾಟೀಲ ಮಾತನಾಡಿ, ಮೇಯರ್ ಆಗಿ ಪ್ರೀತಿ ಕಾಮಕರ್, ಹನುಮಂತ ಕೊಂಗಾಲಿ ಉಪಮೇಯರ್ ಆಗಿ ಆಯ್ಕೆ ಆಗಿದ್ದಾರೆ. ನಾಲ್ಕನೇ ಅವಧಿಗೆ ಮೇಯರ್ , ಉಪಮೇಯರ್ ಆಯ್ಕೆ ಮಾಡಿದ್ದೇವೆ. ರಾಜ್ಯದಲ್ಲಿ ಮೊದಲ ಬಾರಿಗೆ ನೇಕಾರ ಸಮಾಜಕ್ಕೆ ಮೇಯರ್ ಸ್ಥಾನ ನೀಡಲಾಗಿದೆ ಎಂದರು.

ಮುಗಿಲು ಮುಟ್ಟಿದ ಹರ್ಷ : ರಾಜಕೀಯವಾಗಿ ಹಿಂದುಳಿದ ನೇಕಾರ ಸಮುದಾಯಕ್ಕೆ ಕೊನೆಗೂ ಸಿಕ್ತು ನ್ಯಾಯ:

ಬೆಳಗಾವಿಯ ಪ್ರತಿಷ್ಠಿತ ಮೇಯರ್ ಹುದ್ದೆ ಇದೀಗ ನೇಕಾರ ಮಹಿಳೆಗೆ ಒಲಿದು ಬಂದಿದೆ. ಪ್ರೀತಿ ಕಾಮಕರ ಎಂಬ ನೇಕಾರ ಸಮುದಾಯದ ಮಹಿಳೆ ಇದೇ ಪ್ರಥಮ ಬಾರಿಗೆ ಬೆಳಗಾವಿಯ ಅತ್ಯಂತ ಪ್ರತಿಷ್ಠಿತ ಮೇಯರ್ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಇಡೀ ರಾಜ್ಯದಲ್ಲಿ ಪ್ರಥಮ ಬಾರಿಗೆ ಮೇಯರ್ ಹುದ್ದೆ ರಾಜಕೀಯವಾಗಿ ಹಿಂದುಳಿದಿರುವ ನೇಕಾರ ಸಮಾಜಕ್ಕೆ ಸಿಕ್ಕಿದೆ. ಇದರಿಂದಾಗಿ ನೇಕಾರ ಸಮುದಾಯ ಇದೀಗ ಸಂತಸಗೊಂಡಿದ್ದು ಅವರ ಖುಷಿಗೆ ಪಾರವೇ ಇಲ್ಲದಂತಾಗಿದೆ. ನೇಕಾರರ ಹರ್ಷೋದ್ಗಾರ ಮುಗಿಲು ಮುಟ್ಟಿದೆ.

ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ನೇಕಾರ ಸಮುದಾಯ ಪ್ರಾಬಲ್ಯ ಹೊಂದಿದೆ. ಸುಮಾರು 35,000ಕ್ಕೂ ಅಧಿಕ ಮತದಾರರು ಇಲ್ಲಿದ್ದಾರೆ. ವಡಗಾವಿ,ಖಾಸಬಾಗ, ಭಾರತ ನಗರ ಮುಂತಾದ ಪ್ರದೇಶಗಳಲ್ಲಿ ನೇಕಾರ ಸಮುದಾಯದ ಜನ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದು ಇವರ ಮಾತೃಭಾಷೆ ಕನ್ನಡವಾಗಿದೆ. ನೇಕಾರ ಸಮುದಾಯದ ಮಹಿಳೆಯೊಬ್ಬರು ಅದರಲ್ಲೂ ಕನ್ನಡಿಗರು ಮೇಯರ್ ಆಗುತ್ತಿರುವುದಕ್ಕೆ ಇಡೀ ನೇಕಾರ ಸಮಾಜ ಬಹಳ ಸಂತಸ ಗೊಂಡಿದ್ದು ಇದಕ್ಕೆ ಮುಖ್ಯ ರೂವಾರಿಯಾಗಿರುವ ಅಭಯ ಪಾಟೀಲ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದೆ.

ನೇಕಾರ ಸಮುದಾಯದ ಮಹಿಳೆ ಪ್ರೀತಿ ಕಾಮಕರ ಅವರು ಚೊಚ್ಚಲ ಬಾರಿಗೆ ಆಯ್ಕೆಯಾಗಿದ್ದು ಮೊದಲ ಪ್ರಯತ್ನದಲ್ಲೇ ಅವರಿಗೆ ಮೇಯರ್ ಹುದ್ದೆ ಲಭಿಸಿದೆ.


Share It

You cannot copy content of this page