ಬೆಂಗಳೂರು: ಶಾಸಕರಿಗೆ ಐಪಿಎಲ್ ಟಿಕೆಟ್ ನೀಡಬೇಕು ಎಂದು ಎರಡು ದಿನಗಳ ಹಿಂದಷ್ಟೇ ಹೋರಾಟ ನಡೆದಿದ್ದು, ಇದೀಗ ತಮಗೆ ಟಿಕೆಟ್ ಬೇಡ ಎಂದು ಶಾಸಕ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.
ಶಾಸಕರಿಗೆ ಐಪಿಎಲ್ ಟಿಕೆಟ್ ನೀಡುತ್ತಿಲ್ಲ ಎಂದು ಆಗ್ರಹಿಸಿ, ವಿಜಯಾನಂದ ಕಾಶಪ್ಪನವರ್ ವಿಧಾನಸಭೆಯಲ್ಲಿ ಪ್ರಶ್ನೆ ಎತ್ತಿದ್ದರು. ಇದಕ್ಕೆ ಅನೇಕ ಶಾಸಕರು ದನಿಗೂಡಿಸಿದ್ದು, ತಮಗೆ ಐಪಿಎಲ್ ಟಿಕೆಟ್ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರ ಜತೆಗೆ ಸಿಎಂ ಮಾತುಕತೆ ನಡೆಸಿದ್ದು, ಎರೆಡೆರೆಡು ಟಿಕೆಟ್ ನೀಡಲು ಕ್ರಿಕೆಟ್ ಸಂಸ್ಥೆ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಎಲ್ಲ ಶಾಸಕರಿಗೆ ಟಿಕೆಟ್ ವಿತರಣೆ ಮಾಡಲಾಗುತ್ತಿದೆ.
ಈ ನಡುವೆ ಸಾರ್ವಜನಿಕ ವಲಯದಲ್ಲಿ ಟಿಕೆಟ್ ಪಡೆಯಲು ಶಾಸಕರು ನಡೆಸಿದ ಹೋರಾಟ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ತಮಗೆ ಟಿಕೆಟ್ ಬೇಡ ಎಂದು ರಾಜಾಜಿನಗರ ಶಾಸಕ ಸುರೇಶ್ ಸ್ಫೀಕರ್ ಯು.ಟಿ ಖಾದರ್ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.

