ಬೆಳಗಾವಿ: ಶನಿವಾರ ಬೆಳ್ಳಂಬೆಳಗ್ಗೆ ಲಾರಿ ಮೈಮೇಲೆ ಹರಿದು ತೀವ್ರ ಗಾಯಗೊಂಡಿದ್ದ ಪೌರ ಕಾರ್ಮಿಕ ಮಹಿಳೆ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.
ಅವಕ್ಕಾ ಕೋಲಕಾರ (50) ಮೃತ ಪೌರ ಕಾರ್ಮಿಕ ಮಹಿಳೆ. ಎಂದಿನಂತೆ ಸ್ವಚ್ಛತಾ ಕೆಲಸದಲ್ಲಿ ನಿರತರಾಗಿದ್ದ ವೇಳೆ ಖಾನಾಪುರ ರಸ್ತೆಯಲ್ಲಿ ಬೆಳಗಾವಿ ನಗರದಿಂದ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಕೊನೆಯುಸಿರೆಳೆದಿದ್ದಾರೆ. ಸಹೋದ್ಯೋಗಿ ಮೃತಪಟ್ಟಿದ್ದರಿಂದ ಪೌರ ಕಾರ್ಮಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಡಿಕ್ಕಿ ಹೊಡೆದು ವಾಹನ ನಿಲ್ಲಿಸದೇ ಟಿಪ್ಪರ್ ಚಾಲಕ ಅಲ್ಲಿಂದ ಪರಾರಿ ಆಗಿದ್ದ. ಕೂಡಲೇ ಆತನನ್ನು ಬೆನ್ನತ್ತಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ. ಘಟನಾ ಸ್ಥಳಕ್ಕೆ ಮಾಜಿ ಮೇಯರ್ ಮಂಗೇಶ ಪವಾರ, ಮಾಜಿ ಉಪಮೇಯರ್ ವಾಣಿ ಜೋಶಿ, ಮಹಾನಗರ ಪಾಲಿಕೆ ಅಧಿಕಾರಿಗಳು ಸೇರಿ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

