ಬಳ್ಳಾರಿ: ನಗರದ ಹೊರ ವಲಯದಲ್ಲಿ ಅಕ್ರಮವಾಗಿ ಅಡುಗೆ ಅನಿಲ(LPG) ಸಿಲಿಂಡರ್ ಸಂಗ್ರಹಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಳ್ಳಾರಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿ, 9 ಸಿಲಿಂಡರ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಪಶ್ಚಿಮ ಏಷ್ಯಾ ಯುದ್ಧದ ಪರಿಣಾಮ ಎಲ್ಪಿಜಿ ಸಮಸ್ಯೆ ಹಲವೆಡೆ ಉಲ್ಬಣಿಸಿದೆ. ಅಡುಗೆ ಅನಿಲ ಸಿಲಿಂಡರ್ ಕೊರತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ದುರ್ಲಾಭ ಪಡೆಯಲು ಕೆಲವರು ಅಡ್ಡದಾರಿ ಹಿಡಿದಿದ್ದಾರೆ. ಎಲ್ಪಿಜಿ ಸಿಲಿಂಡರ್ಗಳನ್ನು ಸಂಗ್ರಹಿಸಿ, ಕಾಳ ಸಂತೆಯಲ್ಲಿ ಹೆಚ್ಚಿನ ದರಕ್ಕೆ ಸಿಲಿಂಡರ್ ಮಾರಾಟ ಮಾಡುವ ಬಗ್ಗೆ ಮಾಹಿತಿ ಪಡೆದ ಬಳ್ಳಾರಿ ಗ್ರಾಮೀಣ ಪೊಲೀಸರು, ಆಹಾರ ಇಲಾಖೆಯ ಅಧಿಕಾರಿಗಳ ಜತೆಯಲ್ಲಿ ಬಳ್ಳಾರಿಯ ಗೌತಮ ನಗರದಲ್ಲಿ ಸೋಮವಾರ ಮಿಂಚಿನ ಕಾರ್ಯಾಚರಣೆ ನಡೆಸಿ 9 ಸಿಲಿಂಡರ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಆಟೋ ಮೂಲಕ ಅಕ್ರಮವಾಗಿ ಎಲ್ಪಿಜಿ ಸಿಲಿಂಡರ್ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ, ಗ್ರಾಮೀಣ ಪೊಲೀಸರು, ಅಕ್ರಮವಾಗಿ ಸಿಲಿಂಡರ್ ಮಾರಾಟ ಮಾಡುತ್ತಿದ್ದ ಗನಮೂರ್ತಿ ಎಂಬುರನ್ನು ಬಂಧಿಸಿ, ಆತನ ಬಳಿ ಇದ್ದ, 5 ವಾಣಿಜ್ಯ ಬಳಕೆಯ (ಕಮರ್ಷಿಯಲ್) ಗ್ಯಾಸ್ ಸಿಲಿಂಡರ್ಗಳನ್ನು ಹಾಗೂ 4 ಗೃಹ ಬಳಕೆಯ (ಡೊಮೆಸ್ಟಿಕ್) ಗ್ಯಾಸ್ ಸಿಲಿಂಡರ್ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಎಸ್.ಪಿ. ಮಾಹಿತಿ ನೀಡಿದರು.
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಮಗೆ ಅರ್ಜೆಂಟ್ ಆಗಿ ಅಡುಗೆ ಅನಿಲ ಸಿಲಿಂಡರ್ ಬೇಕಾಗಿದೆ ಎಂದು ಗ್ರಾಹಕರ ರೂಪದಲ್ಲಿ ಬೇಡಿಕೆ ಇಟ್ಟು ಕಾರ್ಯಾಚರಣೆ ನಡೆಸಿ, ಆರೋಪಿ ಮೂರ್ತಿಯನ್ನು ಟ್ರ್ಯಾಪ್ ಮಾಡಿದ್ದಾರೆ. ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ, ದಾಖಲಾಗಿದ್ದು, ಗ್ರಾಮೀಣ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಗ್ರಾಮೀಣ ಪಿಐ ಉದಯರವಿ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ತನಿಖೆ ಮುಂದುವರೆದಿದೆ.

