ಬಾಗಲಕೋಟೆ: ಏಪ್ರಿಲ್ 9 ರಂದು ನಡೆಯುವ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಅವರು ಮಂಗಳವಾರ ಬಾಗಲಕೋಟೆಯ ವಿವಿಧ ಬಡಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಪರ ಬಿರುಸಿನ ಪ್ರಚಾರ ನಡೆಸಿದರು.
ವಿದ್ಯಾಗಿರಿ ಸೇರಿ ಹಲವೆಡೆ ಮನೆ ಮನೆಗೆ ತೆರಳಿ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಾಗಲಕೋಟೆ ಮತ್ತು ಸುತ್ತಮುತ್ತಲಿನ ಜನರು ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ಬೇಕೆಂಬ ಬೇಡಿಕೆ ಇಡುತ್ತಲೇ ಬಂದಿದ್ದರು. ಹಿಂದಿನ ಬಿಜೆಪಿ ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯ ವಹಿಸಿತ್ತು. ಆದರೆ, ಎಚ್ ವೈ ಮೇಟಿ ಅವರು ಶಾಸಕರಾಗಿ ಬಾಗಲಕೋಟೆಗೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವಾರು ಭಾಗ್ಯಗಳನ್ನು ರಾಜ್ಯದ ಜನತೆಗೆ ನೀಡಿದ್ದಲ್ಲದೇ, ಕಳೆದ ಮೂರು ವರ್ಷಗಳಿಂದ ಪಂಚ ಗ್ಯಾರಂಟಿ ಕಾರ್ಯಕ್ರಮಗಳನ್ನೂ ನೀಡುವ ಮೂಲಕ ಲಕ್ಷಾಂತರ ಬಡ ಕುಟುಂಬಗಳಿಗೆ ಆರ್ಥಿಕವಾಗಿ ಸಬಲರನ್ನಾಗಿ ಮಾಡಿದ್ದಾರೆ ಎಂದು ತಿಳಿಸಿದರು.
ಎಚ್ ವೈ ಮೇಟಿ ಅವರು ಶಾಸಕರಾಗಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕಾಯಾ ವಾಚಾ ಶ್ರಮಿಸಿದ್ದಾರೆ. ಅವರಂತೆಯೇ ಉಮೇಶ್ ಮೇಟಿ ಅವರು ಜನಪರ ಕಾಳಜಿ ಹೊಂದಿದ್ದಾರೆ. ಉಮೇಶ್ ಅವರಿಗೆ ಅಮೂಲ್ಯವಾದ ಮತ ಚಲಾಯಿಸಿ ಗೆಲುವು ತಂದುಕೊಡಬೇಕೆಂದು ಕರೆ ನೀಡಿದರು.
ಬಿಜೆಪಿ ಆಡಳಿತ ನಡೆಸಿದ್ದರೂ ಬಾಗಲಕೋಟೆ ಜಿಲ್ಲೆಗಾಗಲೀ, ವಿಧಾನಸಭಾ ಕ್ಷೇತ್ರಕ್ಕಾಗಿ ಕಿಂಚಿತ್ತೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿಲ್ಲ. ಕಾಂಗ್ರೆಸ್ ಶಾಸಕರು ಆಯ್ಕೆಯಾಗಿ ಬಂದಾಗ ಮಾತ್ರ ಅದರಲ್ಲೂ ಮೇಟಿಯವರು ಶಾಸಕರಾದಾಗ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದರು ಎಂದು ಸುರೇಶ್ ಹೇಳಿದರು.
ನಾಯಕರು, ಕಾರ್ಯಕರ್ತರ ಜೊತೆ ಸಭೆ: ಈ ಮಧ್ಯೆ, ಸಚಿವ ಬೈರತಿ ಸುರೇಶ್ ಅವರು ಸ್ಥಳೀಯ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ಜೊತೆ ಸಭೆ ನಡೆಸಿ ರಾಜ್ಯ ಸರ್ಕಾರದ ಜನಪ್ರಿಯ ಕಾರ್ಯಕ್ರಮಗಳನ್ನು ವಿವರಿಸಿ ಮತದಾರರನ್ನು ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಗೆಲುವಿಗೆ ಶ್ರಮ ವಹಿಸಬೇಕೆಂದು ಕಿವಿಮಾತು ಹೇಳಿದರು.

