ಬೆಂಗಳೂರು: ನೈಸ್ ರಸ್ತೆ ಕುರಿತು ಮಾತನಾಡಿದ ತಮ್ಮ ವಿರುದ್ಧ ವಿಜಯೇಂದ್ರ ಆಪ್ತ ರುದ್ರೇಶ್ ಅವಾಚ್ಯವಾಗಿ ಮಾತನಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿರುವ ಯಶವಂತಪುರ ಶಾಸಕ ಎಸ್.ಸಿ.ಸೋಮಶೇಖರ್, ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ನೈಸ್ ರಸ್ತೆಯ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ನೈಸ್ ಸಂಸ್ಥೆಯ ದತ್ತು ಪುತ್ರ ಎನಿಸಿಕೊಂಡಿರುವ ರುದ್ರೇಶ್, ನನ್ನ ಬಗ್ಗೆ ಬೂಟು ನೆಕ್ಕಲು ಬರ್ತಿಯಾ ಎಂದು ಪ್ರಶ್ನೆ ಮಾಡಿದ್ದಾರೆ. ಹಾಗಾದರೆ, ಬಿಜೆಪಿಗೆ ಬರಬೇಕೆಂದರೆ ಯಾರ ಬೂಟ್ ನೆಕ್ಕಬೇಕು. ಇದು ಬಿಜೆಪಿ ಪಕ್ಷದ ಸಂಸ್ಕೃತಿಯಾ ಎಂದು ಪ್ರಶ್ನೆ ಮಾಡಿದ್ದಾರೆ.
ತಮಗೆ ಸಂಬಂಧವೇ ಇಲ್ಲದ ವಿಷಯದ ಬಗ್ಗೆ ಮಾತನಾಡಿರುವ ರುದ್ರೇಶ್ ಹಿಡಿತದಲ್ಲಿಯೇ ಬಿಜೆಪಿ ಇದೆಯಾ? ಬಿಜೆಪಿ ಪಕ್ಷ ಸೇರುವ ಕುರಿತು ವಿಜಯೇಂದ್ರ ಮಾತನಾಡಬೇಕು. ಆದರೆ, ರುದ್ರೇಶ್ ಮಾತನ್ನಾಡುತ್ತಾರೆ ಎಂದರೆ, ಅವರೇ ರಾಜ್ಯಾಧ್ಯಕ್ಷರಾ? ಅಥವಾ ರಾಜ್ಯಾಧ್ಯಕ್ಷರ ಎಲ್ಲ ಕೆಲಸಗಳನ್ನು ವಿಜಯೇಂದ್ರ ಅವರು ತಮ್ಮ ಆಪ್ತನಿಗೆ ವಹಿಸಿ ಸುಮ್ಮನಾಗಿದ್ದಾರಾ ಎಂದು ಪ್ರಶ್ನೆ ಮಾಡಿದ್ದಾರೆ.
ಯಶವಂತಪುರ ಕ್ಷೇತ್ರದಲ್ಲಿ ಆರು ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿ, ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಬಿಜೆಪಿ ಸೇರಿದಾಗ ನಿಮಗೆ ಗೊತ್ತಿರುವಂತೆ ನನ್ನ ಅಪೇಕ್ಷೆಗಳೇನು ಇರಲಿಲ್ಲ. ಕ್ಷೇತ್ರದ ಜನತೆ ನನ್ನನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದು ನಿಮಗೆ ಗೊತ್ತಿದೆ. ಹೀಗಿದ್ದೂ, ಇಂತಹ ಮೂರನೇ ವ್ಯಕ್ತಿಯ ಕಡೆಯಿಂದ ಪಕ್ಷದ ಕುರಿತು ಮಾತನಾಡಿಸುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.

