ತುಮಕೂರು: ಸಿದ್ಧಗಂಗಾ ಮಠದಲ್ಲಿ ನಡೆದ ಶಿವೈಕ್ಯ ಡಾ. ಶಿವಕುಮಾರ ಸ್ವಾಮೀಜಿಗಳ 117ನೇ ಜನ್ಮದಿನೋತ್ಸವದ ಸಂಭ್ರಮದ ನಡುವೆ ದುಃಖದ ಘಟನೆ ಒಂದು ನಡೆದಿದೆ. ಮಠದ ಹಳೆಯ ವಿದ್ಯಾರ್ಥಿಯೊಬ್ಬರು ಹೃದಯಾಘಾತದಿಂದ ಅಕಾಲಿಕವಾಗಿ ಮೃತಪಟ್ಟಿದ್ದಾರೆ.
ಮೃತರನ್ನು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ತಾಯೂರು ಗ್ರಾಮದ ನಿವಾಸಿ ನಟರಾಜು (60) ಎಂದು ಗುರುತಿಸಲಾಗಿದೆ. ಅವರು ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಯಾಗಿದ್ದು, ಶ್ರೀಗಳ ಮೇಲಿನ ಅಪಾರ ಭಕ್ತಿಯಿಂದ ಪ್ರತಿವರ್ಷವೂ ಜಯಂತಿ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದವರು. ಈ ಬಾರಿ ಕೂಡ ಇಬ್ಬರು ಸ್ನೇಹಿತರೊಂದಿಗೆ ಮುಂಚಿತವಾಗಿ ಮಠಕ್ಕೆ ಆಗಮಿಸಿದ್ದರು.
ಇಂದು ಬೆಳಿಗ್ಗೆ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಿದ್ಧವಾಗುತ್ತಿದ್ದ ವೇಳೆ, ಶೌಚಾಲಯದಿಂದ ಹಿಂದಿರುಗುವಾಗ ನಟರಾಜು ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತು. ಬಳಿಕ ಮಠದ ಆವರಣದಲ್ಲೇ ಅವರು ಕುಸಿದು ಬಿದ್ದಿದ್ದು, ತಕ್ಷಣ ನೆರವು ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಸ್ಥಳದಲ್ಲೇ ಸಾವನ್ನಪ್ಪಿದರು.
ನಟರಾಜು ಅವರು ಕೆಲವೇ ದಿನಗಳ ಹಿಂದೆ ಹೃದಯ ಸಂಬಂಧಿತ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆಂಬ ಮಾಹಿತಿ ದೊರೆತಿದೆ. ಆರೋಗ್ಯ ಸಮಸ್ಯೆಯಿದ್ದರೂ ಸಹ ಗುರುಭಕ್ತಿಯಿಂದ ಮಠಕ್ಕೆ ಬಂದಿದ್ದ ಅವರು, ತಾವು ವಿದ್ಯಾಭ್ಯಾಸ ಮಾಡಿದ ಅದೇ ಪವಿತ್ರ ಸ್ಥಳದಲ್ಲೇ ಕೊನೆಯುಸಿರೆಳೆದಿರುವುದು ಭಕ್ತರಲ್ಲಿ ದುಃಖ ಮೂಡಿಸಿದೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಕ್ಯಾತಸಂದ್ರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ಶಿವಕುಮಾರ ಶ್ರೀಗಳ ಜಯಂತಿ ಆಚರಣೆಯ ಮಧ್ಯೆ ಈ ಘಟನೆ ಸಂಭವಿಸಿರುವುದು ಮಠಕ್ಕೆ ಆಗಮಿಸಿದ್ದ ಭಕ್ತರಲ್ಲಿ ಶೋಕದ ವಾತಾವರಣ ನಿರ್ಮಿಸಿದೆ.

