ಸುದ್ದಿ

40 ವರ್ಷ ಮೇಲ್ಪಟ್ಟವರಿಗೆ ಉಚಿತ ಕಣ್ಣಿನ ತಪಾಸಣೆ–ಕನ್ನಡಕ: ರಾಜ್ಯ ಸರ್ಕಾರದ ಹೊಸ ಆರೋಗ್ಯ ಯೋಜನೆ

Share It

ಬೆಂಗಳೂರು: ರಾಜ್ಯದಲ್ಲಿ 40 ವರ್ಷ ಮೇಲ್ಪಟ್ಟ ನಾಗರಿಕರ ಕಣ್ಣಿನ ಆರೋಗ್ಯವನ್ನು ಸುಧಾರಿಸಲು ಸರ್ಕಾರವು ಮಹತ್ವದ ಕಾರ್ಯಕ್ರಮವನ್ನು ಆರಂಭಿಸಲು ಮುಂದಾಗಿದೆ. ಈ ಯೋಜನೆಯಡಿ ಉಚಿತ ದೃಷ್ಟಿ ಪರೀಕ್ಷೆ ಹಾಗೂ ಓದುವ ಕನ್ನಡಕಗಳನ್ನು ನೀಡಲಾಗುತ್ತದೆ.

ಈ ಉಪಕ್ರಮವನ್ನು ಜಾರಿಗೆ ತರಲು ಆರೋಗ್ಯ ಇಲಾಖೆ ಅಂತರರಾಷ್ಟ್ರೀಯ ಮಟ್ಟದ ‘ರಿಸ್ಟೋರಿಂಗ್ ವಿಷನ್’ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಯೋಜನೆಯನ್ನು ಆಯುಷ್ಮಾನ್ ಆರೋಗ್ಯ ಮಂದಿರ ಉಪಕೇಂದ್ರಗಳ ಮೂಲಕ ಹಂತ ಹಂತವಾಗಿ ರಾಜ್ಯಾದ್ಯಂತ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ.

ಮೊದಲ ಹಂತದಲ್ಲಿ ಯಾದಗಿರಿ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದ್ದು, ಅಲ್ಲಿ ಸರ್ಕಾರಿ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಉಪಕೇಂದ್ರಗಳ ಮೂಲಕ ಸುಮಾರು ಒಂದು ಲಕ್ಷ ಓದುವ ಕನ್ನಡಕಗಳನ್ನು ಉಚಿತವಾಗಿ ವಿತರಿಸಲು ಯೋಜನೆ ರೂಪಿಸಲಾಗಿದೆ.

ಆರೋಗ್ಯ ಇಲಾಖೆ ಅಂದಾಜಿನ ಪ್ರಕಾರ, ಯಾದಗಿರಿ ಜಿಲ್ಲೆಯಲ್ಲಿ ಶೇಕಡಾ 28ರಷ್ಟು ಜನರು ಸಮೀಪ ಅಥವಾ ದೂರದೃಷ್ಟಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಂತಹ ಸಮಸ್ಯೆಗಳನ್ನು ಸರಳ ಓದುವ ಕನ್ನಡಕಗಳ ಮೂಲಕ ಸುಲಭವಾಗಿ ಸರಿಪಡಿಸಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ ‘ಆಶಾ ಕಿರಣ’ ಯೋಜನೆಯ ಅನುಭವವನ್ನು ಆಧರಿಸಿ ಈ ಹೊಸ ಕಾರ್ಯಕ್ರಮ ರೂಪಿಸಲಾಗಿದೆ. ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಸಿಬ್ಬಂದಿ ಮನೆ ಮನೆಗೆ ತೆರಳಿ ದೃಷ್ಟಿ ತಪಾಸಣೆ ನಡೆಸಲಿದ್ದಾರೆ. ಇದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಸುಲಭವಾಗಿ ಸೇವೆ ತಲುಪುವ ನಿರೀಕ್ಷೆಯಿದೆ.

ಮುಂದಿನ ಹಂತಗಳಲ್ಲಿ ಈ ಯೋಜನೆಯನ್ನು ರಾಜ್ಯದ ಇತರೆ ಜಿಲ್ಲೆಗಳಿಗೂ ವಿಸ್ತರಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.


Share It

You cannot copy content of this page