ಏಪ್ರಿಲ್ 15 ರಂದು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ಭೈರವೈಕ್ಯ ಮಂದಿರವನ್ನು ಉದ್ಘಾಟಿಸಲಿದ್ದಾರೆ. ಮೋದಿಯವರಿಗಾಗಿ ಮೈಸೂರು ಶೈಲಿಯ ವಿಶೇಷ ಗಂಡಭೇರುಂಡ ಲಾಂಛನದ ಪೇಟ ಸಿದ್ಧವಾಗಿದೆ. ಮತ್ತೊಂದೆಡೆ, ಕ್ಷೇತ್ರದಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಏ.15 ರಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಅಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ ಅವರ ಗದ್ದುಗೆ, ಉದ್ಘಾಟನೆ ಮಾಡಿ ಅನಂತರ ಬಿಜಿಎಸ್ ಮೈದಾನದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಮೈಸೂರು ಪೇಟ ಹಾಕಿ ಸ್ವಾಗತಿಸಲು ಮೈಸೂರಿನಲ್ಲಿ ವಿಶಿಷ್ಟ ಬಗೆಯ ಮೈಸೂರು ಪೇಟ ಕಲಾವಿದ ನಂದನ್ ಅವರ ಕೈ ಚಳಕದಲ್ಲಿ ಸಿದ್ಧವಾಗಿದ್ದು, ಆ ಪೇಟದ ವಿಶೇಷದ ಬಗ್ಗೆ ಕಲಾವಿದ ನಂದನ್ ಸಿಂಗ್ ವಿವರಿಸಿದ್ದಾರೆ.
ಮೋದಿಯವರ ಸ್ವಾಗತಕ್ಕೆ ಸಿದ್ಧವಾಗಿರುವ ಮೈಸೂರು ಪೇಟ ಇದು. ಇದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪೇಟದ ಮಾದರಿಯಾಗಿದ್ದು, ಇದರಲ್ಲಿ ಮೈಸೂರು ಸಿಲ್ಕ್ ಹಾಗೂ ಬನಾರಸ್ ಸಾಪ್ಟ್ ಸಿಲ್ಕ್ನ್ನು ಬಳಸಲಾಗಿದೆ. ಇದನ್ನು ನಾಲ್ವಡಿ ಕೆಂಪು ಪೇಟ ಎಂದು ಕರೆಯುತ್ತಾರೆ. ಈ ಒಂದು ಪೇಟವನ್ನು ತಯಾರು ಮಾಡಲು 5 ದಿನ ಸಮಯ ಬೇಕಾಯಿತು. ಇದನ್ನು ಮೋದಿಯವರ ಸ್ವಾಗತಕ್ಕೆ ಮೈಸೂರಿನ ಸೇವಾ ಟ್ರಸ್ಟ್ ಕೆಂಪು ಪೇಟ ಬೇಕು ಎಂದು ತಿಳಿಸಿತ್ತು. ಈ ಹಿಂದೆ ಮೋದಿಯವರಿಗೆ ಕೆಂಪೇಗೌಡ ಮಾದರಿಯ ಪೇಟವನ್ನು ಮಾಡಿಕೊಡಲಾಗಿತ್ತು ಎಂದು ವಿವರಿಸಿದ್ದಾರೆ.ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಇಡೀ ಆದಿಚುಂಚನಗಿರಿ ಕ್ಷೇತ್ರ ಮಧುವಣಗಿತ್ತಿಯಂತೆ ಕಂಗೊಳಿಸುತ್ತಿದೆ. ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಈ ಭೈರವೈಕ್ಯ ಮಂದಿರವು ಹಲವು ವಿಶೇಷತೆಗಳಿಂದ ಕೂಡಿದೆ. ಕಾರ್ಯಕ್ರಮಕ್ಕಾಗಿ ಬಿಜಿಎಸ್ ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆ ನಿರ್ಮಾಣವಾಗಿದ್ದು, ಒಂದು ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಮುನ್ನೆಚ್ಚರಿಕಾ ಕ್ರಮವಾಗಿ 2000ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

