ಮಹಾರಾಷ್ಟ್ರ-ಕರ್ನಾಟಕ ಗಡಿ ಭಾಗದಲ್ಲಿ ತಂದೆಯೊಬ್ಬರು ತಮ್ಮ 6 ವರ್ಷದ ಮಗನನ್ನು ಕೊಲೆ ಮಾಡಿದ್ದಾರೆ. ಮಗು ತನ್ನ ಹೋಲಿಕೆ ಇಲ್ಲವೆಂಬ ಡಿಎನ್ಎ ಅನುಮಾನದಿಂದ, ಮಲ್ಲಿಕಾರ್ಜುನ ಆರೇಕರಿ ಎಂಬಾತ ಮಗನನ್ನು ಕೃಷ್ಣಾ ನದಿಗೆ ಎಸೆದಿದ್ದಾನೆ. ವಿಜಯಪುರದಿಂದ ಮಗುವನ್ನು ಕರೆದೊಯ್ದು ಈ ಕ್ರೂರ ಕೃತ್ಯ ಎಸಗಿದ್ದು, ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಘಟನೆ ಸಮಾಜದಲ್ಲಿ ಆಘಾತ ಮೂಡಿಸಿದೆ.
ಪುಣೆ, ಏಪ್ರಿಲ್ 14: ತಾನೇ ಈ ಮಗುವಿನ ತಂದೆ ಹೌದೋ ಅಲ್ಲವೋ ಎಂಬ ಅನುಮಾನದಲ್ಲಿ ತನ್ನ ಆರು ವರ್ಷದ ಮಗನನ್ನು ತಂದೆ ಕೊಲೆ(Murder) ಮಾಡಿ ಕೃಷ್ಣಾ ನದಿಗೆ ಎಸೆದಿರುವ ಘಟನೆ ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ಭಾಗದಲ್ಲಿ ನಡೆದಿದೆ. ಮಗ ತನ್ನ ಹೋಲಿಕೆ ಇಲ್ಲ ಎಂದು ಅನುಮಾನ ಪಟ್ಟ ತಂದೆ ಡಿಎನ್ಎ ಪರೀಕ್ಷೆ ಮಾಡಿಸುವ ಬದಲು ಮಗನನ್ನೇ ಕೊಲೆ ಮಾಡಿ ನದಿಗೆ ಎಸೆದಿದ್ದಾನೆ.ವಿಜಯಪುರ ಜಿಲ್ಲೆಯ ನಾಗಠಾಣೆ ಗ್ರಾಮದ ಮಲ್ಲಿಕಾರ್ಜುನ ಆರೇಕರಿ ಮತ್ತು ಭಾಗ್ಯಶ್ರೀ ದಂಪತಿಯ ಆರು ವರ್ಷದ ಮಗ ಸಿದ್ಧಾರ್ಥ್. ಸುಂದರವಾಗಿದ್ದ ಆ ಮಗು ತನ್ನ ತಂದೆಯನ್ನೇ ಹೋಲುತ್ತಿಲ್ಲ ಎಂದು ಕೆಲವು ಪರಿಚಯಸ್ಥರು ಹೇಳಿದ್ದ ಹಿನ್ನಲೆಯಲ್ಲಿ ಮಲ್ಲಿಕಾರ್ಜುನನ ತಲೆಯಲ್ಲಿ ವಿಷ ಬಿತ್ತಿತ್ತು. ಕಳೆದ ಒಂದೂವರೆ ವರ್ಷಗಳಿಂದ ಇದೇ ವಿಷಯಕ್ಕೆ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಕೊನೆಗೆ ಈ ಸಂಶಯ ಕೊಲೆಯಲ್ಲಿ ಅಂತ್ಯವಾಯಿತು.

