ಅಪರಾಧ ಕ್ರೀಡೆ

ಅಕ್ರಮವಾಗಿ ಐಪಿಎಲ್ ಟಿಕೆಟ್ ಮಾರಾಟ: ಚಿನ್ನಸ್ವಾಮಿ ಕ್ರೀಡಾಂಗಣದ ಕ್ಯಾಂಟೀನ್ ಉದ್ಯೋಗಿ ಬಂಧನ

Share It

 ಇಂಡಿಯನ್​ ಪ್ರೀಮಿಯರ್​ ಲೀಗ್ (ಐಪಿಎಲ್) ಕ್ರಿಕೆಟ್​ ಟೂರ್ನಿಯ ಪಂದ್ಯಗಳ ಟಿಕೆಟ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದವರ ವಿರುದ್ಧ ಸಿಸಿಬಿ ಕಾರ್ಯಾಚರಣೆ ಮುಂದುವರೆದಿದ್ದು, ಓರ್ವ ಆರೋಪಿಯನ್ನು ಬಂಧಿಸಲಾಗಿದೆ.

ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಐಪಿಎಲ್ ಟಿಕೆಟ್ ಮಾರಾಟ ಮಾಡುತ್ತಿದ್ದ ಚಿನ್ನಸ್ವಾಮಿ ಕ್ರೀಡಾಂಗಣದ ಶ್ರೀ ಲಕ್ಷ್ಮೀ ಕ್ಯಾಂಟೀನ್‌ನ ನೌಕರ ಪಿ.ಚಂದ್ರಶೇಖರ್ ಬಂಧಿತ ಆರೋಪಿ. ಬುಧವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ನಡುವಿನ ಪಂದ್ಯದ ವೇಳೆ ಟಿಕೆಟ್ ಮಾರುತ್ತಿದ್ದಾಗ ಆರೋಪಿಯನ್ನು ಬಂಧಿಸಲಾಗಿದೆ

ಬಂಧಿತನಿಂದ ಸುಮಾರು 100ಕ್ಕೂ ಅಧಿಕ ಐಪಿಎಲ್ ಟಿಕೆಟ್‌ಗಳನ್ನು ಜಪ್ತಿ ಮಾಡಲಾಗಿದೆ. ಪ್ರಕರಣದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಸದಸ್ಯ ಎನ್ನಲಾದ ಗಣೇಶ್ ಹರಿಕೇಶ್ ಎಂಬವರ ಹೆಸರು ಸಹ ಕೇಳಿ ಬಂದಿದ್ದು, ಅವರ ಪತ್ತೆಗೆ ತನಿಖೆ ಮುಂದುವರೆದಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಚಾರಣೆ ವೇಳೆ, ಕೆಎಸ್‌ಸಿಎ ಸದಸ್ಯ ಎನ್ನಲಾದ ಗಣೇಶ್ ಹರಿಕೇಶ್ ಅವರು ಮಾರ್ಚ್ 28ರಂದು ನಡೆದ ಆರ್‌ಸಿಬಿ – ಎಸ್‌ಆರ್‌ಹೆಚ್ ನಡುವಿನ ಪಂದ್ಯದ 81 ಹಾಗೂ ಆರ್‌ಸಿಬಿ – ಎಲ್‌ಎಸ್‌ಜಿ ನಡುವಿನ ಪಂದ್ಯದ 100 ಟಿಕೆಟ್‌ಗಳನ್ನು ನೀಡಿದ್ದರು. ಈ ಟಿಕೆಟ್‌ಗಳನ್ನು 15 ರಿಂದ 19 ಸಾವಿರ ರೂಪಾಯಿಗೆ ಮಾರಾಟ ಮಾಡುವಂತೆ ಸೂಚಿಸಿದ್ದರು ಎಂದು ಆರೋಪಿ ಹೇಳಿರುವುದಾಗಿ ತಿಳಿದು ಬಂದಿದೆ.

ಕಂಪನಿಗಳ ಹೆಸರಿನಲ್ಲಿ ಟಿಕೆಟ್ ಖರೀದಿಸಿ ಅಕ್ರಮ ಮಾರ್ಗದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಮಾರಾಟಕ್ಕೆ ಸಹಕರಿಸಿದ ಆರೋಪದಡಿ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಸಿಸಿಬಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.


Share It

You cannot copy content of this page