ಪಂಚ ರಾಜ್ಯಗಳ ಫಲಿತಾಂಶದ ಬಳಿಕ ನಾಯಕತ್ವ ಬದಲಾವಣೆ ಚರ್ಚೆ ಮುನ್ನೆಲೆಗೆ ಬಂದಿದ್ದು ಮೇ ೧೪ ರಂದು ಕ್ಯಾಬಿನೆಟ್ ವಿಸ್ತರಣೆ ಕನ್ಫರ್ಮ್ ಎನ್ನುತ್ತಿವೆ ರಾಜಕೀಯ ಮೂಲಗಳು.
ಬೆಂಗಳೂರು: ಸಚಿವ ಸಂಪುಟ ಪುನಾರಚನೆ, ಪಂಚ ರಾಜ್ಯಗಳ ಫಲಿತಾಂಶದ ಬಳಿಕ ನಾಯಕತ್ವ ಬದಲಾವಣೆ ಚರ್ಚೆ ಮಧ್ಯೆ ಒಂದಷ್ಟು ಸಿಎಂ ಆಪ್ತ ಬಣದ ನಾಯಕರು ಹೈಕಮಾಂಡ್ ಭೇಟಿಯಾಗಲು ದೆಹಲಿಗೆ ತೆರಳಿರುವುದು ಕುತೂಹಲ ಕೆರಳಿಸಿದೆ. ಇದು ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡಿದೆ.
ಒಂದೆಡೆ ಡಿಸಿಎಂ ಡಿ.ಕೆ.ಶಿವಕುಮಾರ್ ಮೇ.15ರ ಹುಟ್ಟಹಬ್ಬದಂದು ಶುಭ ಸುದ್ದಿ ಸಿಗಲಿದೆ ಎಂದು ರಾಮನಗರದ ಶಾಸಕ ಇಕ್ಬಾಲ್ ಹುಸೇನ್ ಮತ್ತೆ ಹೊಸ ಬಾಂಬ್ ಸಿಡಿಸುವ ಮೂಲಕ ಡಿಕೆ ಆಪ್ತ ಶಾಸಕರ ಹೇಳಿಕೆಗಳು ಪಟ್ಟದಾಟ ಚುರುಕು ಪಡೆಯುವ ಲಕ್ಷಣಗಳು ಕಾಣುತ್ತಿವೆ. ಇನ್ನೊಂದೆಡೆ ಮೇ ತಿಂಗಳಾಂತ್ಯಕ್ಕೆ ಸಿದ್ದರಾಮಯ್ಯರ ಅಧಿಕಾರಕ್ಕೆ 3 ವರ್ಷ ತುಂಬಲಿದೆ. ಇದರ ಮಧ್ಯೆ ನಾಯಕತ್ವ ಬದಲಾವಣೆಯ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕೆಲವು ದಿನಗಳಿಂದ ನಡೆಯುತ್ತಿರುವ ಕಾಂಗ್ರೆಸ್ನಲ್ಲಿನ ಬೆಳವಣಿಗೆಗಳು, ನಾಯಕರ ಹೇಳಿಕೆಗಳು ಪವರ್ ಫೈಟ್ ಕುತೂಹಲವನ್ನು ಕೆರಳಿಸಿದೆ.
ಸಚಿವ ಸಂಪುಟ ಪುನರ್‌ರಚನೆ ಕುರಿತು ಚರ್ಚೆಗಳು ತೀವ್ರಗೊಂಡಿರುವ ನಡುವೆ ಸಿಎಂ ಆಪ್ತ ಬಣದ ಸಚಿವರು ಸೇರಿದಂತೆ ಕೈ ನಾಯಕರು ದಿಢೀರ್ ದೆಹಲಿಗೆ ತೆರಳಿ ಹೈ ಕಮಾಂಡ್ ಭೇಟಿ ಮಾಡುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಸಚಿವರಾದ ಹೆಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ದೆಹಲಿ ಭೇಟಿ ನೀಡಿರುವುದು ರಾಜಕೀಯ ಬದಲಾವಣೆ ಚರ್ಚೆಗೆ ಮತ್ತಷ್ಟು ಪುಷ್ಠಿ ನೀಡಿದೆ. ಇತ್ತ ತಟಸ್ಥ ಬಣದ ಸಚಿವ ಕೆ.ಹೆಚ್.ಮುನಿಯಪ್ಪ ಕೂಡ ದೆಹಲಿ ಭೇಟಿ ನೀಡಿರುವುದು ಒಂದಷ್ಟು ರಾಜಕೀಯ ವ್ಯಾಖ್ಯಾನಗಳನ್ನು ಸೃಷ್ಟಿಸಿದೆ.

