“
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ತಮ್ಮ ಆಪ್ತ ಮಿತ್ರ ಮತ್ತು ಶ್ರೇಷ್ಠ ವ್ಯಕ್ತಿ ಎಂದು ಕರೆದಿದ್ದಾರೆ. ತಾವು ಪ್ರಧಾನಿ ಮೋದಿ ಅವರ ದೊಡ್ಡ ಅಭಿಮಾನಿಯಾಗಿರುವುದಾಗಿಯೂ ಅವರು ಹೇಳಿದ್ದಾರೆ.
ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿಯು ಆಯೋಜಿಸಿದ್ದ ತಮ್ಮ ದೇಶದ 250ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಟ್ರಂಪ್ ಅವರು ವೀಡಿಯೊ ಮೂಲಕ ಸಂಬೋಧಿಸಿದರು. ಈ ವೇಳೆ ಭಾರತದೊಂದಿಗಿನ ತಮ್ಮ ಸ್ನೇಹವನ್ನು ಕುರಿತು ಮಾತನಾಡಿದ ಅವರು, “ನಾವು ಭಾರತದೊಂದಿಗೆ ಎಂದಿಗಿಂತಲೂ ಹೆಚ್ಚಿನ ನಿಕಟತೆಯನ್ನು ಸಾಧಿಸಿದ್ದೇವೆ. ಭಾರತವು ನಮ್ಮ ಮೇಲೆ ಶೇಕಡಾ ನೂರು ವಿಶ್ವಾಸವನ್ನಿಡಬಹುದು. ಆ ದೇಶಕ್ಕೆ ತಮಗೆ ಬೇಕಾದ ಎಲ್ಲವನ್ನೂ ಪಡೆದುಕೊಳ್ಳುವ ಹಕ್ಕಿದೆ” ಎಂದು ಘೋಷಿಸಿದರು.
ಈ ಸಂದರ್ಭದಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ, ಭಾರತಕ್ಕಾಗಿರುವ ಅಮೆರಿಕ ರಾಯಭಾರಿ ಸರ್ಜಿಯೊ ಗೋರ್ ಮತ್ತು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಉಪಸ್ಥಿತರಿದ್ದರು.
ಅಮೆರಿಕ ಅಧ್ಯಕ್ಷರು ತಮ್ಮ ವಿದೇಶಾಂಗ ಕಾರ್ಯದರ್ಶಿಯನ್ನೂ ಹೊಗಳಿದರು. ಮಾರ್ಕೊ ರುಬಿಯೊ ಅವರನ್ನು “ಅಮೆರಿಕದ ಇತಿಹಾಸದಲ್ಲಿಯೇ ಅತ್ಯುತ್ತಮ ವಿದೇಶಾಂಗ ಕಾರ್ಯದರ್ಶಿ” ಎಂದು ಟ್ರಂಪ್ ಪ್ರಶಂಸಿಸಿದರು.
ತಮ್ಮ ಭಾಷಣದ ಸಂದರ್ಭದಲ್ಲಿ ಇರಾನ್ ವಿಚಾರವನ್ನೂ ಪ್ರಸ್ತಾಪಿಸಿದ ಟ್ರಂಪ್, ಇರಾನ್ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವವರೆಗೂ ಆ ದೇಶದ ಮೇಲಿನ ನಿರ್ಬಂಧಗಳನ್ನು ಮುಂದುವರಿಸುವುದಾಗಿ ಸ್ಪಷ್ಟಪಡಿಸಿದರು.

