ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾತ್ರ ದೆಹಲಿಗೆ ಕರೆತಂದ ಕಾಂಗ್ರೆಸ್ ಹೈಕಮಾಂಡ್ ನಡೆಯ ಈಗ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಮುಖ್ಯಮಂತ್ರಿಯವರು ಮೇ ೨೬ರಂದು ಬೆಳಿಗ್ಗೆ ರಾಷ್ಟ್ರರಾಜಧಾನಿಗೆ ತೆರಳಿ ಅಲ್ಲಿಯೇ ೧೧ ಗಂಟೆಗೆ ಹೈಕಮಾಂಡ್ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ಸಭೆಯ ವೇಳಾಪಟ್ಟಿ ಹೊರಬಿದ್ದ ತಕ್ಷಣವೇ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಕುರಿತಾದ ಊಹಾಪೋಹಗಳಿಗೆ ಪುನಶ್ಚೇತನ ದೊರಕಿದೆ.
ಸಂಪುಟ ವಿಸ್ತರಣೆ ಮತ್ತು ಅಧಿಕಾರ ಹಂಚಿಕೆ ಪ್ರಶ್ನೆಗಳ ನಡುವೆಯೇ ಈ ಕರೆ ಬಂದಿರುವುದು ಮಹತ್ವದ್ದೆನಿಸಿದೆ. ಸಿದ್ದರಾಮಯ್ಯ ಅವರು ತಾವು ದೆಹಲಿಗೆ ಹೋಗುವ ಬಗ್ಗೆ ಸಚಿವರಿಗೆ ತಿಳಿಸಿದ್ದು, ಮಾಧ್ಯಮಗಳ ಮುಂದೆ “ಹೈಕಮಾಂಡ್ ಕರೆದಿದೆ, ಹೋಗುತ್ತಿದ್ದೇನೆ. ಚರ್ಚೆಯ ವಿಷಯ ಗೊತ್ತಿಲ್ಲ” ಎಂದು ಹೇಳಿದ್ದಾರೆ. ಇನ್ನು ಈ ಕುರಿತು ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, “ನನಗೂ ಹೈಕಮಾಂಡ್ ನಿಂದ ಕರೆ ಬಂದರೆ, ನಾನೂ ಖಂಡಿತ ದೆಹಲಿಗೆ ಹೋಗ್ತೀನಿ” ಎಂದು ಹೇಳುವ ಮೂಲಕ ತಮ್ಮ ಅಸಮಾಧಾನವನ್ನು ಸೂಕ್ಷ್ಮವಾಗಿ ವ್ಯಕ್ತಪಡಿಸಿದ್ದಾರೆ.
ಕಳೆದ ತಿಂಗಳುಗಳಿಂದ ಕರ್ನಾಟಕದ ಮುಖ್ಯಮಂತ್ರಿ ಸ್ಥಾನದ ವಿಚಾರದಲ್ಲಿ ಪಕ್ಷದೊಳಗೆ ಎರಡು ಸ್ಪಷ್ಟ ಬಣಗಳು ಕಾಣಿಸಿಕೊಂಡಿವೆ. ಸಿದ್ದರಾಮಯ್ಯ ಅವರನ್ನೇ ಮುಂದುವರಿಸಬೇಕೆಂಬ ಬೆಂಬಲಿಗರಿದ್ದರೆ, ಡಿ.ಕೆ.ಶಿವಕುಮಾರ್ ಅವರಿಗೆ ಹುದ್ದೆ ನೀಡುವಂತೆ ಆಗ್ರಹಿಸುವವರೂ ಇದ್ದಾರೆ. ಆದರೆ ಅಂತಿಮ ತೀರ್ಪು ಹೈಕಮಾಂಡ್ ನದೇ ಎಂದು ಡಿಸಿಎಂ ಸ್ಪಷ್ಟಪಡಿಸಿದ್ದಾರೆ. ಸಿದ್ದರಾಮಯ್ಯ ಅವರ ದೆಹಲಿ ಪ್ರಯಾಣದ ಬೆನ್ನಲ್ಲೇ, ಶಿವಕುಮಾರ್ ಅವರೂ ರಾಜಧಾನಿಗೆ ತೆರಳುವ ಸಾಧ್ಯತೆಗಳು ಕೂಡ ಬಲಗಾಣುತ್ತಿವೆ. ಮೂರು ವರ್ಷ ಪೂರೈಸಿರುವ ಈ ಸರ್ಕಾರದ ಭವಿಷ್ಯದ ದಿಕ್ಕು ಈ ಮಾತುಕತೆಗಳ ಬಳಿಕ ಸ್ಪಷ್ಟವಾಗಲಿದೆ.

