ಬೆಂಗಳೂರು: ಲೈಂಗಿಕ ದೌರ್ಜನ್ಯ ಮತ್ತು ಅಪಹರಣ ಪ್ರಕರಣದಲ್ಲಿ ಈಗಾಗಲೇ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಾಜಿ ಸಚಿವ ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡುತ್ತದೆಯೋ ಅಥವಾ ಮತ್ತಷ್ಟು ದಿನಗಳ ಕಾಲ ಅವರಿಗೆ ಜೈಲೆ ಗತಿಯೇ ಎಂಬುದೀಗ ಕುತೂಹಲ ಮೂಡಿಸಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಈಗಾಗಲೇ ವಿಚಾರಣೆ ನಡೆದಿದ್ದು, ನ್ಯಾಯಾಧೀಶರು ವಿಚಾರಣೆಯನ್ನು ಎಸ್‌ಐಟಿ ಪರ ವಕೀಲರ ಮನವಿ ಮೇರೆಗೆ ಸೋಮವಾರಕ್ಕೆ ಮುಂದೂಡಿದ್ದರು. ಹೆಚ್ಚುವರಿ ವಾದದ ಅವಶ್ಯಕತೆಯಿದೆ ಎಂಬ ಕಾರಣ ನೀಡಿದ್ದು, ಇಂದು ಯಾವ ವಿಷಯಗಳ ಆಧಾರದಲ್ಲಿ ವಾದ ಮಂಡನೆ ಮಾಡುತ್ತಾರೆ ಎಂಬುದರ ಮೇಲೆ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ.
ಬೆಳಗ್ಗೆ ೧೧.೩೦ಕ್ಕೆ ಅರ್ಜಿ ವಿಚಾರಣೆಗೆ ಬರಲಿದೆ. ಕಳೆದ ಶುಕ್ರವಾರ ರೇವಣ್ಣ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು ಒಂದೂವರೆ ಗಂಟೆಗಳ ಕಾಲ ವಾದ ಮಂಡಿಸಿದ್ದರು. ಸರ್ಕಾರಿ ಪರ ವಕೀಲೆ ಜಯ್ನಾ ಕೊಠಾರಿ ಸಹ ರೇವಣ್ಣ ಅವರಿಗೆ ಜಾಮೀನು ನೀಡಿದರೆ ಪ್ರಕರಣದ ಮೇಲಾಗುವ ವ್ಯತಿರಿಕ್ತ ಪರಿಣಾಮ ಕುರಿತಂತೆ ಪ್ರತಿವಾದ ಮಾಡಿದ್ದರು.
ಅರ್ಜಿ ವಿಚಾಋಣೆಗೆ ಮೊದಲೇ, ಕಿಡ್ನಾಪ್ ಆಗಿದ್ದರು ಎನ್ನಲಾದ ಮಹಿಳೆಯ ವಿಡಿಯೋ ಬಿಡುಗಡೆಯಾಗಿದೆ. ಆಕೆ ಅದರಲ್ಲಿ, ನನ್ನನ್ನು ಯಾರೂ ಕಿಡ್ನಾಪ್ ಮಾಡಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಈ ವಿಡಿಯೋ ಇಟ್ಟುಕೊಂಡು ರೇವಣ್ಣ ಪರ ವಕೀಲರು ಸಂತ್ರಸ್ತೆ ಕಿಡ್ನ್ಯಾಪ್ ಆಗಿರಲಿಲ್ಲ. ಬಲವಂತವಾಗಿ ಸಿಆರ್‌ಪಿಸಿ ೧೬೪ ಹೇಳಿಕೆ ಕೊಡಿಸಲಾಗಿದೆ ಎಂದು ವಾದಿಸುವ ಸಾಧ್ಯತೆಯಿದೆ.
ಎಸ್ ಐಟಿ ಪರ ವಕೀಲರು, ಈಗಾಗಲೇ ನ್ಯಾಯಾದೀಶರ ಮುಂದೆ ದಾಖಲಾಗಿರುವ ಹೇಳಿಕೆ ಮತ್ತು ಅವರ ಮೇಲೆ ಒತ್ತಡ ಹಾಕಿ ವಿಡಿಯೋ ಮಾಡಿಸಿರುವ ಅಂಶವನ್ನಿಟ್ಟುಕೊಂಡು ಜಾಮೀನು ನೀಡದಂತೆ ಮನವಿ ಮಾಡುವ ಸಾಧ್ಯತೆಯಿದೆ. ಜತೆಗೆ ಪ್ರಜ್ವಲ್ ರೇವಣ್ಣ ಈವರೆಗೆ ವಿದೇಶದಲ್ಲಿಯೇ ತಲೆಮರೆಸಿಕೊಂಡಿರುವುದು ರೇವಣ್ಣ ಅವರ ನಡೆಯನ್ನಿಟ್ಟುಕೊಂಡು, ರೇವಣ್ಣಗೆ ಜಾಮೀನು ನೀಡಿದರೆ, ಇವರು ತಲೆಮರೆಸಿಕೊಳ್ಳಬಹುದು ಎಂಬ ವಾದವನ್ನು ನ್ಯಾಯಾದೀಶರ ಮುಂದಿಡಲು ತೀರ್ಮಾನಿಸಿದ್ದಾರೆ. ಹೀಗಾಗಿ, ರೇವಣ್ಣಗೆ ಇಂದು ಜಾಮೀನು ಸಿಗುತ್ತಾ ಅಥವಾ ಸೆರೆ ವಾಸ ಮುಂದುವರಿಯುತ್ತದೆಯಾ ಕಾದು ನೋಡಬೇಕಿದೆ.