ಉಪಯುಕ್ತ ಸುದ್ದಿ

60 ವರ್ಷ ಬಳಿಕ ಪತ್ನಿಗೆ ಸಿಕ್ತು ಆರ್ಥಿಕ ನೆರವು: 1965ರ ಇಂಡೋ-ಪಾಕ್ ಯುದ್ಧದಲ್ಲಿ ಹುತಾತ್ಮ

Share It

ಬಾಗೇಶ್ವರ(ಉತ್ತರಾಖಂಡ): 1965ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಹುತಾತ್ಮರಾದ ಸೇನಾ ಯೋಧನ ಪತ್ನಿಗೆ ಆರು ದಶಕಗಳ ನಂತರ ಆರ್ಥಿಕ ನೆರವು ಸಿಕ್ಕಿದೆ.

ಭಾರತೀಯ ಸೇನೆ ಮತ್ತು ಸೈನಿಕ ಕಲ್ಯಾಣ ಇಲಾಖೆ ಜಂಟಿ ಪ್ರಯತ್ನಗಳಿಂದಾಗಿ ಬಾಗೇಶ್ವರ ಜಿಲ್ಲೆಯ ದಿವಂಗತ ಸೈನಿಕ ಮದನ್ ಸಿಂಗ್ ಪತ್ನಿ ದೇಬುಲಿ ದೇವಿ ಮೃತ ಯೋಧರ ಪತ್ನಿಯರಿಗೆ ಮೀಸಲಾದ ಆರ್ಥಿಕ ನೆರವಿನ ಮೊದಲ ಕಂತನ್ನು ಇತ್ತೀಚೆಗೆ ಪಡೆದರು. 1965ರ ಭಾರತ-ಪಾಕ್ ಯುದ್ಧದಲ್ಲಿ ಮದನ್ ಸಿಂಗ್ ಪ್ರಾಣತ್ಯಾಗ ಮಾಡಿದ್ದರು. ಭಾರತೀಯ ಸೇನೆ ಮತ್ತು ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಕಚೇರಿ, ನಿವೃತ್ತ ಲೆಫ್ಟಿನೆಂಟ್ ಕರ್ನಲ್ ವೇದ್ ಪ್ರಕಾಶ್ ಜೋಶಿ (ಸೇನಾ ಪದಕ), ಕುಮಾನ್ ರೆಜಿಮೆಂಟ್ ಮತ್ತು ಒಐಸಿ ಪಿಸಿಡಿಎ ಪ್ರಯಾಗರಾಜ್ ಅವರ ಸಂಘಟಿತ ಪ್ರಯತ್ನಗಳ ಮೂಲಕ, ಮೊದಲ ಕಂತಾಗಿ 28.45 ಲಕ್ಷ ರೂ.ಗಳನ್ನು ದೇಬುಲಿ ದೇವಿ ಖಾತೆಗೆ ಜಮಾ ಮಾಡಲಾಗಿದೆ.

ಯುದ್ಧ, ಗಡಿ ಘರ್ಷಣೆಗಳು, ಭಯೋತ್ಪಾದಕ ದಾಳಿಗಳು ಅಥವಾ ಸಕ್ರಿಯ ಮಿಲಿಟರಿ ಕಾರ್ಯಾಚರಣೆ ಸಮಯದಲ್ಲಿ ಸೈನಿಕರು ಕರ್ತವ್ಯ ನಿರ್ವಹಿಸುವಾಗ ಹುತಾತ್ಮರಾದ ಸಂದರ್ಭಗಳಲ್ಲಿ ಈ ಪಿಂಚಣಿ ನೀಡಲಾಗುತ್ತದೆ. ಯುದ್ಧದಲ್ಲಿ ಹುತಾತ್ಮರ ಪ್ರಕರಣಗಳನ್ನು ಪರಿಶೀಲಿಸಲು ಮತ್ತು ಬಾಕಿ ಇರುವ ಅರ್ಜಿಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಪ್ರಾರಂಭಿಸಿದ ವಿಶೇಷ ಅಭಿಯಾನದ ಅಡಿ ಪ್ರಕರಣ ಮರು ಪರಿಶೀಲಿಸಲಾಯಿತು. ಬಹುತೇಕ ಅದೇ ಮೊತ್ತದ ಮತ್ತೊಂದು ಕಂತು ಇನ್ನೂ ಬಾಕಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಿಲಿಟರಿ ಅಧಿಕಾರಿಗಳ ಪ್ರಕಾರ, ಎನ್​ಪಿಎಸಿಗೆ ಸಂಬಂಧಿಸಿದ ದಾಖಲೆ ಮತ್ತು ಬಾಕಿ ಪ್ರಮಾಣಪತ್ರ ಇನ್ನೂ ಖಜಾನೆ ಕಚೇರಿ ಮತ್ತು ಜಿಲ್ಲಾ ಸೈನಿಕ ಕಲ್ಯಾಣ ಕಚೇರಿ ಮೂಲಕ ಪ್ರಯಾಗ್‌ರಾಜ್‌ಗೆ ಕಳುಹಿಸಬೇಕಾಗಿದೆ. ಪ್ರಕ್ರಿಯೆ ಪೂರ್ಣಗೊಂಡ ನಂತರ, ಬಾಕಿ ಮೊತ್ತವನ್ನು ದೇಬುಲಿ ದೇವಿ ಅವರ ಖಾತೆಗೆ ಜಮಾ ಮಾಡಲಾಗುತ್ತದೆ.


Share It

You cannot copy content of this page