ಸುದ್ದಿ

KPSC ಅಧ್ಯಕ್ಷ ಸ್ಥಾನದಿಂದ ಶಿವಶಂಕರಪ್ಪ ಸಾಹುಕಾರ್ ಅಮಾನತುಗೊಳಿಸಿ ರಾಜ್ಯಪಾಲರ ಆದೇಶ

Share It

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ(KPSC) ಸಮಗ್ರತೆ ಮತ್ತು ವಿಶ್ವಾಸಾರ್ಹತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕೆಪಿಎಸ್​ಸಿ ಅಧ್ಯಕ್ಷರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ. ಈ ಸಂಬಂಧ ಲೋಕಭವನದಿಂದ ಮಾಧ್ಯಮ‌ ಹೇಳಿಕೆ ಬಿಡುಗಡೆ ಮಾಡಲಾಗಿದೆ.

ಕರ್ನಾಟಕ ಲೋಕಸೇವಾ ಆಯೋಗದ ಸಮಗ್ರತೆ ಮತ್ತು ವಿಶ್ವಾಸಾರ್ಹತೆಯನ್ನು ರಕ್ಷಿಸಲು ಜೊತೆಗೆ ನಿಷ್ಪಕ್ಷಪಾತ, ನ್ಯಾಯಸಮ್ಮತ ಮತ್ತು ತನಿಖೆ ಮೇಲೆ ಪ್ರಭಾವ ಬೀರದಂತೆ ಖಾತ್ರಿಪಡಿಸಲು ರಾಜ್ಯಪಾಲರು ಕೆಪಿಎಸ್​ಸಿ ಅಧ್ಯಕ್ಷರನ್ನು ರಾಷ್ಟ್ರಪತಿಗಳ ಕಚೇರಿಯಿಂದ ಮುಂದಿನ ಆದೇಶ ಬರುವವರೆಗೆ ಅಮಾನತುಗೊಳಿಸಿದ್ದಾರೆ. ಹಾಗೂ ಮುಂದಿನ ಆದೇಶದವರೆಗೆ ಆಯೋಗದ ಮುಂದಿನ ಅತ್ಯಂತ ಹಿರಿಯ ಸದಸ್ಯರು ಕೆಪಿಎಸ್‌ಸಿ ತಾತ್ಕಾಲಿಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಬೇಕು ಎಂದು ರಾಜ್ಯಪಾಲರು ಆದೇಶಿಸಿದ್ದಾರೆ.

ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಎಸ್.ಸಾಹುಕಾರ್ ತಮ್ಮ ಇಬ್ಬರು ಪುತ್ರಿಯರನ್ನು ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗಳಿಗೆ ನಿಯಮಬಾಹಿರ ಹಾಗೂ ಕಾನೂನುಬಾಹಿರವಾಗಿ ಆಯ್ಕೆ ಮಾಡಲು ನೆರವಾಗಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಲೋಕಭವನಕ್ಕೆ ದೂರುಗಳನ್ನು ಸಲ್ಲಿಕೆ ಮಾಡಲಾಗಿತ್ತು. KPSC ಆಯ್ಕೆ ಪ್ರಕ್ರಿಯೆಯಲ್ಲಿ ತಮ್ಮ ನೇರ ಅವಲಂಬಿತರು ಭಾಗವಹಿಸಿದ್ದ ಸಂದರ್ಭದಲ್ಲಿ, ಅಧ್ಯಕ್ಷರು ಆ ಪ್ರಕ್ರಿಯೆಯಿಂದ ದೂರ ಸರಿಯಲು ಹಾಗೂ ಹಿತಾಸಕ್ತಿ ಸಂಘರ್ಷದ ಬಗ್ಗೆ ಔಪಚಾರಿಕ ಘೋಷಣೆ ಮಾಡಲು ವಿಫಲರಾಗಿದ್ದಾರೆ ಎಂಬುದು ಪತ್ತೆಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅಧ್ಯಕ್ಷರ ಪುತ್ರಿಯಲ್ಲೊಬ್ಬರು ವಾರ್ಷಿಕ 40,000 ರೂ. ಕೌಟುಂಬಿಕ ಆದಾಯವನ್ನು ಘೋಷಿಸಿ ಆದಾಯ ಮತ್ತು ಜಾತಿ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದಾರೆ. ಅವರ ತಂದೆ ಆಯೋಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ನಿಗದಿತ ಮಿತಿಗಿಂತ ಹೆಚ್ಚಿನ ಆದಾಯವನ್ನು ಹೊಂದಿದ್ದಾರೆ ಎಂಬ ಸತ್ಯ ತಿಳಿದಿದ್ದರೂ ಸಹ, ಉದ್ದೇಶಪೂರ್ವಕವಾಗಿ ಸತ್ಯವನ್ನು ಮರೆಮಾಚಿ ಮತ್ತು ತಿರುಚಿದ ಕಡಿಮೆ ಆದಾಯದ ಘೋಷಣೆಗಳನ್ನು ಬಳಸುವ ಮೂಲಕ ಅಧ್ಯಕ್ಷರ ಪುತ್ರಿಯು ಒಬಿಸಿ ಮೀಸಲಾತಿ ಮತ್ತು ಕೆನೆಪದರ (Creamy Layer) ವಿನಾಯಿತಿಯನ್ನು ಪಡೆದುಕೊಂಡಿದ್ದಾರೆ ಎಂಬುದನ್ನು ಈ ಪುರಾವೆಗಳು ಸೂಚಿಸುತ್ತವೆ ಎಂದು ವಿವರಿಸಲಾಗಿದೆ.


Share It

You cannot copy content of this page