ಬೆಂಗಳೂರು: ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಬಹುತೇಕ ಖಚಿತವಾದ ಬೆನ್ನಲ್ಲೇ ರಾಜೀನಾಮೆಗೆ ಮುನ್ನ ಮತ್ತೊಂದು ಮಾಸ್ಟರ್ ಸ್ಟ್ರೋಕ್ಗೆ ಮುಂದಾಗಿದ್ದಾರೆ.
ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷೆಯ ಜಾತಿ ಸಮೀಕ್ಷೆಯ ವರದಿಯನ್ನು ಪಡೆಯುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ರಾಜೀನಾಮೆಗೆ ಮೊದಲೇ ವರದಿ ಪಡೆದು, ಅದನ್ನು ಘೋಷಣೆ ಮಾಡುವ ಮೂಲಕ ಅಹಿಂದ ವರ್ಗಗಳ ಒಲವು ಪಡೆಯುವ ಪ್ರಯತ್ನದಲ್ಲಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಸಿಎಂ ನಿವಾಸ ಕಾವೇರಿಯಲ್ಲಿ ನಡೆದ ಆಪ್ತ ಸಚವರು ಮತ್ತು ಶಾಸಕರ ಜತೆಗಿನ ಸಭೆಯ ನಂತರ ಸಿದ್ದರಾಮಯ್ಯ ಅವರು, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್ ಅವರನ್ನು ವರದಿಯೊಂದಿಗೆ ಆಗಮಿಸುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ವರದಿಯನ್ನು ಇಂದು ಸಂಜೆಯೇ ವಿಧಾನಸೌಧದಲ್ಲಿ ಸ್ವೀಕಾರ ಮಾಡಲು ತೀರ್ಮಾನಿಸಿದ್ದಾರೆ ಎನ್ನಲಾಗುತ್ತಿದೆ.
ಕಳೆದ ಬಾರಿ ವರದಿ ತಯಾರಿಕೆಗೆ ಎಲ್ಲ ಅನುದಾನವನ್ನು ನೀಡಿ, ಅಧಿಕಾರದಿಂದ ಕೆಳಗಿಳಿಯುವ ಸಂದರ್ಭದಲ್ಲಿ ಜಾತಿಗಣತಿ ವರದಿಯನ್ನು ಸ್ವೀಕಾರ ಮಾಡಿರಲಿಲ್ಲ ಎಂಬ ಆರೋಪವಿತ್ತು. ಇದೀಗ ಜಾತಿಗಣತಿ ವರದಿಯ ಮರು ಪರಿಷ್ಕರಣೆಗೆ ಕೊಟ್ಟಿದ್ದು, ಈಗ ವರದಿ ಸ್ವೀಕಾರ ಮಾಡದೆ ರಾಜೀನಾಮೆ ನೀಡಿದರೆ, ಮತ್ತೊಂದು ಅಪಾದನೆ ಅವರ ಮೇಲೆ ಬರಲಿದೆ.
ಈ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ವರದಿಯನ್ನು ಪಡೆದು, ಅದಕ್ಕೆ ಅಂಕಿತವನ್ನಾಕಿ ರಾಜೀನಾಮೆ ನೀಡುವ ಪ್ರಯತ್ನದಲ್ಲಿ ಸಿಎಂ ಇದ್ದಾರೆ. 2018ರಲ್ಲಿ ಸಿಎಂ ಜಾತಿಗಣತಿ ವರದಿ ಪಡೆಯದೆ ಅಧಿಕಾರದಿಂದ ಕೆಳಗಿಳಿದಿದ್ದರು. ಮತ್ತೇ ಅಧಿಕಾರಕ್ಕೆ ಬಂದಾಗ ಹಳೆಯ ವರದಿಯಲ್ಲಿರುವ ಲೋಪದೋಷ ಸರಿಪಡಿಸುವಂತೆ ಕಾಂಗ್ರೆಸ್ ಪಕ್ಷವೂ ಸೇರಿದಂತೆ ಒಕ್ಕಲಿಗ ಮತ್ತು ಲಿಂಗಾಯತ ನಾಯಕರು ವಿರೋಧಿಸಿದ್ದರು.
ಇದೀಗ ಡಿಕೆಶಿ ಸಿಎಂ ಆದರೆ, ವರದಿ ನೆನೆಗುದಿಗೆ ಬೀಳುವುದು ಪಕ್ಕಾ ಎಂಬುದು ಗೊತ್ತಾಗಿದ್ದು, ಅದನ್ನು ತಾವು ಅಧಿಕಾರದಲ್ಲಿದ್ದಾಗಲೇ ಅಂಗೀಕರಿಸಿ ಸಿಎಂ ಸ್ಥಾನದಿಂದ ಕೆಳಗಿಳಿಯುವ ಪ್ರಯತ್ನವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಅದನ್ನು ಅನುಷ್ಠಾನಕ್ಕೆ ತರದಿದ್ದರೆ, ಹಿಂದುಳಿದ ವರ್ಗಗಳ ಕೆಂಗಣ್ಣಿಗೆ ಗುರಿಯಾಗುವ ಅಪಾಯ ಮುಂದಿನ ಸಿಎಂ ಮೇಲೆ ಇರಲಿದೆ.

