ಬೆಂಗಳೂರು: ಡಿ ಕೆ ಶಿವಕುಮಾರ್ ಗೆ ಸಿಎಂ ಸ್ಥಾನ ಬಿಟ್ಟುಕೊಟ್ಟು ಸಿದ್ದರಾಮಯ್ಯ ಅವರೇನೋ ಮಾತು ಉಳಿಸಿಕೊಂಡರು. ಆದರೆ, ತಮ್ಮ ಪರಮಾಪ್ತರಿಗೆ ಕೊಟ್ಟಿದ್ದ ಮಾತನ್ನೇ ಉಳಿಸಿಕೊಳ್ಳುವಲ್ಲಿ ಡಿಕೆ ಶಿವಕುಮಾರ್ ವಿಫಲವಾದರೇ ಎಂಬ ಅನುಮಾನಗಳು ಕಾಡುತ್ತಿವೆ.
ಇಂದು ಡಿಕೆ ಸಂಪುಟಕ್ಕೆ 13 ಸಚಿವರ ಸೇರ್ಪಡೆಯಾಗಿದೆ. ಅನೇಕ ಹಿರಿಯ ಸಚಿವರಿಗೆ ಮಣೆ ಹಾಕಲಾಗಿದೆ. ಆದರೆ ಖಾತೆ ಹಂಚಿಕೆಯಲ್ಲಿ ಆಗಿರುವ ಯಡವಟ್ಟು ಇಂತಹದ್ದೊಂದು ಅನುಮಾನ ಮೂಡಿಸಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಸ್ಥಾನಕ್ಕೆ ರಾಮಲಿಂಗ ರೆಡ್ಡಿ ಅವರ ಬದಲಿಗೆ ಕೃಷ್ಣ ಬೈರೇಗೌಡ ಎನ್ನಲಾಗುತ್ತಿದ್ದು, ಡಿಕೆಶಿ ತಮ್ಮ ಮಾತನ್ನು ತಾವೇ ಮರೆತುಬಿಟ್ರಾ ಎಂಬ ಮಾತುಗಳು ಕೇಳಿಬಂದಿವೆ.
2023 ರಲ್ಲಿ ಸರಕಾರ ರಚನೆಯಾದಾಗ ಸಚಿವ ರಾಮಲಿಂಗಾ ರೆಡ್ಡಿ ತಮ್ಮ ಅನುಭವಕ್ಕೆ ತಕ್ಕ ಖಾತೆ ನೀಡಿಲ್ಲ ಎಂದು ರಾಜೀನಾಮೆಗೆ ಮುಂದಾಗಿದ್ರು. ಆಗ ಸಿಎಂ ಸ್ಥಾನ ವಂಚಿತರಾಗಿ ಬೇಸರದಲ್ಲಿದ್ದ ಡಿಕೆ ಶಿವಕುಮಾರ್ ಅವರು ತಮ್ಮ ಸಹೋದರ ಸುರೇಶ್ ಜತೆಗೆ ತೆರಳಿ ರಾಮಲಿಂಗ ರೆಡ್ಡಿ ಅವರನ್ನು ಮನವೊಲಿಸಿದ್ದರು.
ಡಿಕೆ ಸಹೋದರರ ಮಾತಿಗೆ ಕಟ್ಟು ಬಿದ್ದು ಸಾರಿಗೆ ಇಲಾಖೆ ಜವಾಬ್ದಾರಿ ವಹಿಸಿಕೊಂಡ ರಾಮಲಿಂಗ ರೆಡ್ಡಿ, ಸರಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯನ್ನು ಸಮರ್ಥವಾಗಿ ಜಾರಿಗೊಳಿಸಿ ವಿಶ್ವದಾಖಲೆ ಸ್ಥಾಪಿಸಿದ್ದಾರೆ. ಸಂಕಷ್ಟದಲ್ಲಿದ್ದರೂ ಇಲಾಖೆಯಲ್ಲಿ ಅನೇಕ ಸುಧಾರಣೆ ತಂದಿದ್ದಾರೆ.
ಅಷ್ಟಕ್ಕೂ ಡಿಕೆ ಸಹೋದರರು ಕೊಟ್ಟಿದ್ದ ಮಾತೇನು?: ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಮನವೊಲಿಸುವ ಸಂದರ್ಭದಲ್ಲಿ , ತಾವು ಎರಡೂವರೆ ವರ್ಷದ ನಂತರ ಅಧಿಕಾರಕ್ಕೆ ಬರುವುದಾಗಿ ತಿಳಿಸಿದ್ದ ಡಿಕೆ ಅಲ್ಲೀವರಗೆ ಮಾತ್ರ ಸಾರಿಗೆ ಇಲಾಖೆ ಜವಾಬ್ದಾರಿ ನಿರ್ವಹಿಸಿ, ನಾನು ಸಿಎಂ ಆದ ನಂತರ ಬೆಂಗಳೂರು ನಗರದ ಹೊಣೆಗಾರಿಕೆ ನಿಮ್ಮದಾಗಲಿದೆ ಎಂದಿದ್ದರು.
ಅದರೆ, ಇದೀಗ ಕೃಷ್ಣ ಬೈರೇಗೌಡ ಅವರಿಗೆ ಬೆಂಗಳೂರು ಉಸ್ತುವಾರಿ ನೀಡಲು ಸಿದ್ದತೆ ನಡೆದಿದೆ. ಇದಕ್ಕಾಗಿ ಹೈಕಮಂಡ್ ಮಟ್ಟದಲ್ಲಿ ಲಾಭಿ ನಡೆದಿದೆ ಎನ್ನಲಾಗಿದೆ. ಆದರೆ, ಸಚಿವ ಸ್ಥಾನಕ್ಕಾಗಿ ಎಂದೂ ಲಾಭಿ ನಡೆಸದ ರಾಮಲಿಂಗ ರೆಡ್ಡಿ ತಮ್ಮ ಆಪ್ತ ಡಿಕೆಶಿ ಮಾತು ಕೇಳಿ ಸುಮ್ಮನ್ನಿದ್ದ ಕಾರಣಕ್ಕೆ ಬೆಂಗಳೂರು ಉಸ್ತುವಾರಿ ಕೈತಪ್ಪಿದೆ. ಮಾತು ಕೊಟ್ಟಿದ್ದ ಡಿಕೆ ಶಿ ಮಾತು ತಪ್ಪಿದ್ದು, ತಮ್ಮ ಆಪ್ತರಿಗೆ ಅನ್ಯಾಯ ಮಾಡಿದಂತಾಗಿದೆ.
ಜಿಬಿಎ ಚುನಾವಣೆಗೆ ಭಾರೀ ಹಿನ್ನಡೆ: ಜಿಬಿಎ ಚುನಾವಣೆಯನ್ನು ಆಗಸ್ಟ್ 31 ರೊಳಗೆ ನಡೆಸುವಂತೆ ಸುಪ್ರೀ ಕೋರ್ಟ್ ಹೇಳಿದೆ. ಆಂತರಿಕ ಸಮೀಕ್ಷೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲುವ ವರದಿ ಸಿಕ್ಕಿದೆ.
ರಾಮಲಿಂಗಾ ರೆಡ್ಡಿ ಬೆಂಗಳೂರು ಉಸ್ತುವಾರಿಯಾದರೆ, ಅವರಿಗೆ ನಗರದ ನಾಡಿಮಿಡಿತದ ಅರಿವಿದೆ. ಹೀಗಾಗಿ, ಅವರು ಪಕ್ಷಕ್ಕೆ ಹೊಸ ಬಲ ತುಂಬಬಲ್ಲರು ಎಂಬ ನಿರೀಕ್ಷೆ ನಗರದ ಕಾರ್ಯಕರ್ತರಲ್ಲಿತ್ತು. ಆದರೆ, ಲಾಭಿಗೆ ಮಣಿದ ಹೈಕಮಾಂಡ್ ಕೃಷ್ಣ ಬೈರೇಗೌಡಗೆ ಬೆಂಗಳೂರು ಉಸ್ತುವಾರಿ ಕೊಟ್ಟರೆ, ತಾವು ಕೊಟ್ಟ ಮಾತು ಮರೆತ ಸಿಎಂ ಡಿಕೆಶಿ, ರಾಮಲಿಂಗ ರೆಡ್ಡಿ ಅವರನ್ನು ಕೈ ಬಿಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

