ಚಿಕ್ಕಬಳ್ಳಾಪುರ: ಕಮ್ಯುನಿಕೇಶನ್ ಉದ್ದೇಶಕ್ಕೆ ಮಾಡಿಕೊಂಡ ವಾಟ್ಸಾಪ್ ಗ್ರೂಪ್ ನೂರಾರು ಮಕ್ಕಳ ವಿದ್ಯಾಭ್ಯಾಸಕ್ಕೆ ದಾರಿದೀಪವಾಗಿದೆ.
ಭೀಮ ಹಸ್ತ ಹೆಸರಿನಲ್ಲಿ ಗೌರಿಬಿದನೂರು ತಾಲೂಕಿನ ಸಮಾನ ಮನಸ್ಕ ಯುವಕರು ಸೇರಿ ತಂಡವೊಂದನ್ನು ಕಟ್ಟಿಕೊಂಡರು. ಇದು ಮುಂದೆ ಬರಬರುತ್ತಾ ಭೀಮ ಹಸ್ತ ಶೈಕ್ಷಣಿಕ ಮತ್ತು ಸಾಮಾಜಿಕ ಸಂಸ್ಥೆಯ ರೂಪ ಪಡೆದುಕೊಂಡಿತು. ಇದು ನಿರಂತರವಾಗಿ ಸಮಾಜಮುಖಿ ಕೆಲಸ ಮಾಡುವ ಮೂಲಕ ಗಮನ ಸೆಳೆದಿದೆ.
ಕಳೆದ ಎಂಟು ತಿಂಗಳ ಹಿಂದೆ ಸಮಾನ ಮನಸ್ಕ ಯುವಕರು ತಮ್ಮ ಕೈಯಿಂದಲೇ ಪ್ರತಿ ತಿಂಗಳು ಕನಿಷ್ಠ ರೂಪಾಯಿಯಿಂದ ಗುಂಪಿನ ಪ್ರತಿ ಸದಸ್ಯರು ತಮ್ಮ ಶಕ್ತಾನುಸಾರ ಡೊನೇಷನ್ ಕೊಡುತ್ತಾರೆ. ಅದೆಲ್ಲವನ್ನು ಒಟ್ಟುಗೂಡಿಸಿ, ಆ ಹಣವನ್ನು ಆ ತಿಂಗಳಲ್ಲಿ ತಾಲೂಕು ವ್ಯಾಪ್ತಿಯ ಅರ್ಹ, ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ನೆರವಾಗುತ್ತಿದ್ದಾರೆ.
ಈ ಪ್ರಕ್ರಿಯೆ ಕಳೆದ ಎಂಟು ತಿಂಗಳಿಂದ ನಡೆಯುತ್ತಿದ್ದು, ಪ್ರತಿ ತಿಂಗಳು ಮೂರು ನಾಲ್ಕು ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ಸಹಾಯ ಮಾಡಲಾಗುತ್ತಿದೆ. ಇಂಥ ವಿದ್ಯಾರ್ಥಿಗಳನ್ನು ಗುರುಯಿಸುವಲ್ಲಿಯೂ ಕೂಡ ತಂಡದ ಸದಸ್ಯರು ಪಾರದರ್ಶಕ ಸರ್ವೆ ನಡೆಸುತ್ತಾರೆ. ಇದರಿಂದ ಅರ್ಹ ವಿದ್ಯಾರ್ಥಿಗಳಿಗೆ ಸಹಾಯಧನ ತಲುಪುವ ಕೆಲಸ ಸರಾಗವಾಗಿ ನಡೆಯುತ್ತಿದೆ.
ಈ ಕುರಿತು ಭೀಮಾ ಹಸ್ತ ಶೈಕ್ಷಣಿಕ ಮತ್ತು ಸಾಮಾಜಿಕ ಸೇವಾ ಸಂಸ್ಥೆಯ ಯುವಕರು, ತಾವು ಮಾಡಿದ ಕೆಲಸ ಮತ್ತಷ್ಟು ಮಂದಿಗೆ ಮಾದರಿ ಅದರಷ್ಟೇ ಸಾಕು, ನಮ್ಮಲ್ಲಿರುವ ಪ್ರತಿ ಸದಸ್ಯ ಸಮಾನವಾಗಿ ಸಹಾಯ ಮಾಡುತ್ತಿದ್ದು, ಎಲ್ಲ ಸದಸ್ಯರು ತಮ್ಮ ಶ್ರಮದಿಂದ ಸಂಪಾದಿಸಿದ ಹಣವನ್ನು ಬಳಸಿ ಬಡವರಿಗೆ ಸಹಾಯ ಮಾಡುತ್ತಿದ್ದೇವೆ. ಮುಂದೆ ಮತ್ತಷ್ಟು ದೊಡ್ಡ ಮಟ್ಟದ ಸಹಾಯ ಮಾಡುವ ಆಸೆಯಿದೆ. ಇದು ನಿರಂತರವಾಗಿ ನಡೆಯಲೋದೆ ಎಂದಿದ್ದಾರೆ.

