ಅಪರಾಧ ಸುದ್ದಿ

ವರದಕ್ಷಿಣೆ ಕಿರುಕುಳ ಆರೋಪ: ಪಿಎಸ್​ಐ ಅರೆಸ್ಟ್

Share It

ಬೆಂಗಳೂರು: ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ ನೀಡಿದ್ದಲ್ಲದೇ, ಮಚ್ಚಿನಿಂದ ಹಲ್ಲೆಗೆ ಯತ್ನಿಸಿದ್ದ ಆರೋಪದಡಿ ಓರ್ವ ಪೊಲೀಸ್ ಸಬ್ ಇನ್ಸ್​ಪೆಕ್ಟರ್​​ನನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ಧಾರೆ.

ಹಲ್ಲೆಗೊಳಗಾದ ಪತ್ನಿ ರೇವತಿ ನೀಡಿದ ದೂರು ಆಧರಿಸಿ ಪಿಎಸ್ಐ ಕೆ.ಎಸ್.ಬೈರಪ್ಪ ಅವರನ್ನು ಬಂಧಿಸಲಾಗಿದೆ. ಕೃತ್ಯ ನಡೆದ ಸ್ಥಳ ಆಧರಿಸಿ ತಾವರೆಕೆರೆ ಪೊಲೀಸರಿಗೆ ಪ್ರಕರಣ ಹಸ್ತಾಂತರಿಸಲಾಗಿದೆ. ಆರೋಪಿ ಬೈರಪ್ಪ ಸದ್ಯ ನಗರ ಪೊಲೀಸ್ ಆಯುಕ್ತರ ಕಚೇರಿ ಕಂಟ್ರೋಲ್ ರೂಮ್ ವಿಭಾಗದಲ್ಲಿ ಪಿಎಸ್ಐ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆಯಲ್ಲಿ ಟ್ರ್ಯಾಪ್ ಆದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದರು.

ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಚನಾಪುರ ನಿವಾಸಿ ಬೈರಪ್ಪಗೆ ಐದು ವರ್ಷದ ಹಿಂದೆ ಮದುವೆಯಾಗಿದ್ದು, ಮೂರು ವರ್ಷದ ಹೆಣ್ಣು ಮಗುವಿದೆ. ಅನ್ಯೋನ್ಯವಾಗಿದ್ದ ದಂಪತಿ ಮಧ್ಯೆ ಕೆಲವು ತಿಂಗಳ ಹಿಂದೆ ವೈಮನಸ್ಸು ಮೂಡಿದೆ. ಪರಸ್ತ್ರೀ ಜತೆ ಸಂಬಂಧ ಹೊಂದಿರುವ ವಿಚಾರಕ್ಕಾಗಿ ದಂಪತಿ ಮಧ್ಯೆ ಜಗಳವಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ವಿಚಾರಕ್ಕಾಗಿ ಜುಲೈ 12ರಂದು ಮನೆಯಲ್ಲಿ ಗಲಾಟೆ ನಡೆದಿದೆ. ತಾನು ಪಿಎಸ್ಐ ಆಗಿದ್ದು, ಮದುವೆ ವೇಳೆ ವರದಕ್ಷಿಣೆ ಕೊಟ್ಟಿಲ್ಲ. ಹೀಗಾಗಿ ತವರು ಮನೆಯಿಂದ 50 ಲಕ್ಷ ರೂ ತೆಗೆದುಕೊಂಡು ಬರುವಂತೆ ಒತ್ತಾಯಿಸಿ ನನ್ನ ಮೇಲೆ ಹಲ್ಲೆ ಮಾಡಿದ್ದರು. ಪತಿ ಮನೆಯವರು ಇದಕ್ಕೆ ಸಾಥ್ ನೀಡಿದ್ದರು. ಇದನ್ನು ಪ್ರಶ್ನಿಸಿದಕ್ಕೆ ನನ್ನ ತಂದೆಗೆ ಮಚ್ಚಿನಿಂದ ಹಲ್ಲೆ ಮಾಡುವುದಾಗಿ ಬೆದರಿಸಿರುವುದಾಗಿ ಪತ್ನಿ ರೇವತಿ ಆರೋಪಿಸಿದ್ದಾರೆ.

ಕೆಂಗೇರಿ ಪೊಲೀಸರಿಗೆ ಪತಿ ವಿರುದ್ಧ ದೂರು ನೀಡಿದರೂ ಎನ್​​ಸಿಆರ್ (ಗಂಭೀರ ಸ್ವರೂಪವಲ್ಲದ ಅಪರಾಧ) ದಾಖಲಿಸಿಕೊಂಡು ಸುಮ್ಮನಾಗಿದ್ದರು. ಹೀಗಾಗಿ ಎಫ್ಐಆರ್ ದಾಖಲಿಸುವಂತೆ ಡಿಜಿಪಿ ಕಚೇರಿಗೆ ಬಂದಿದ್ದೇನೆ. ವರದಕ್ಷಿಣೆ ವಿಚಾರಕ್ಕಾಗಿ ತನ್ನ ಮೇಲೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡಿದ್ದಾರೆ. ಪತಿ ಪರಸ್ತ್ರೀ ಜೊತೆ ಸಂಬಂಧ ಇರಿಸಿಕೊಂಡಿದ್ದು, ಪ್ರಶ್ನಿಸಿದ್ದಕ್ಕೆ ವಿಚ್ಚೇದನ ನೀಡುವಂತೆ ತಾಕೀತು ಮಾಡಿದ್ದಾರೆ. ಅಧಿಕಾರ ಪ್ರಭಾವ ಬಳಸಿಕೊಂಡು ನನ್ನ ಮತ್ತು ತಂದೆಯ ಮೇಲೆ ಹಲ್ಲೆ ನಡೆಸಲು ರೌಡಿಗಳನ್ನು ಮನೆಯ ಬಳಿ ಕರೆಯಿಸಿಕೊಂಡಿದ್ದಾರೆ ಎಂದು ಪತ್ನಿ ದೂರಿದ್ಧಾರೆ.

ದೂರು ನೀಡಿದರೂ ಪ್ರಕರಣ ದಾಖಲಿಸಿಕೊಳ್ಳಲು ಮೀನಮೇಷ ತೋರಿರುವ ಕೆಂಗೇರಿ ಪೊಲೀಸರ ವಿರುದ್ಧವೂ ಕ್ರಮಕ್ಕಾಗಿ ರೇವತಿ ಆಗ್ರಹಿಸಿದ್ದಾರೆ. ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ ಎನ್​ಸಿಆರ್ ದಾಖಲಿಸಿಕೊಂಡಿದ್ದ ಕೆಂಗೇರಿ ಪೊಲೀಸರು ಬೈರಪ್ಪ ಅವರನ್ನು ಬಂಧಿಸಿದ್ಧಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನೈರುತ್ಯ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣನವರ್, “ಜುಲೈ 12ರಂದು ದೂರು ನೀಡಿದ ಮೇರೆಗೆ ಎನ್​ಸಿಆರ್ ದಾಖಲಿಸಿ ವಿಚಾರಣೆ ನಡೆಸಿದಾಗ ಕೃತ್ಯವೆಸಗಿರುವುದು ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಂಬುವುದು ಗೊತ್ತಾಗಿದೆ. ಆದಾಗ್ಯೂ ದೂರು ದಾಖಲಿಸಿ ಆರೋಪಿಯನ್ನು ಬಂಧಿಸಿ ಅಲ್ಲಿನ ಪೊಲೀಸರಿಗೆ ಒಪ್ಪಿಸಲಾಗಿದೆ” ಎಂದು ಮಾಹಿತಿ ನೀಡಿದರು.


Share It

You cannot copy content of this page