ಕೇಂದ್ರ ಸಚಿವರ ಮೇಲೆ ಒತ್ತಡ ಹೇರಲು ರಾಜ್ಯದ ಸಂಸದರಿಗೆ ಈಶ್ವರ ಖಂಡ್ರೆ: ರಾಜ್ಯದಿಂದ ಆಯ್ಕೆಯಾದ ಸಂಸದರೆಲ್ಲರಿಗೂ ಈಶ್ವರ ಖಂಡ್ರೆ ಪತ್ರ
ಬೆಂಗಳೂರು: 15ನೇ ಹಣಕಾಸು ಆಯೋಗದ ಶಿಫಾರಸಿನಂತೆ 2025-26ನೇ ಸಾಲಿನಲ್ಲಿ ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ಹಂಚಿಕೆ ಮಾಡಿದ್ದ 2186.20 ಕೋಟಿ ರೂ. ಅನುದಾನವನ್ನು ಕೇಂದ್ರ ಸರ್ಕಾರ ತಡೆಹಿಡಿದಿರುವ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ರಾಜ್ಯದಿಂದ ಆಯ್ಕೆಯಾದ ಎಲ್ಲ ಸಂಸದರಿಗೆ ಪತ್ರ ಬರೆದಿದ್ದಾರೆ.
ತಂತ್ರಾಂಶದ ತೊಡಕನ್ನೇ ಕಾರಣವಾಗಿಟ್ಟುಕೊಂಡು ಕೇಂದ್ರ ಸರ್ಕಾರ ಬಾಕಿ ಹಣ ಬಿಡುಗಡೆ ಮಾಡದಿರುವುದರಿಂದ ಮೊದಲೇ ಮಳೆ ಕೊರತೆ ಎದುರಿಸುತ್ತಿರುವ ರಾಜ್ಯದ ಗ್ರಾಮೀಣಾಭಿವೃದ್ಧಿಗೆ ತೊಡಕಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಪಂಚಾಯತ್ ರಾಜ್ ಸಚಿವ ರಾಜೀವ್ ರಂಜನ್ ಸಿಂಗ್ ಅವರ ಮೇಲೆ ಎಲ್ಲ ಸಂಸದರೂ ಒತ್ತಡ ಹೇರಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಎಲ್ಲ ನಿಗದಿತ ಷರತ್ತುಗಳನ್ನು ಪಾಲಿಸಿದ್ದರೂ ಕೇಂದ್ರ ಸರ್ಕಾರ 15ನೇ ಹಣಕಾಸು ಆಯೋಗದ ಶಿಫಾರಸಿನಂತೆ 2025-2026ನೇ ಆರ್ಥಿಕ ವರ್ಷದಲ್ಲಿ ರಾಜ್ಯದ ಗ್ರಾಮ ಪಂಚಾಯತಿಗಳಿಗೆ 2186.20 ಕೋಟಿ ರೂ. ತಡೆಹಿಡಿದಿದೆ. ಈ ಸಂಬಂಧ ಇಲಾಖೆ ಪತ್ರ ಬರೆದರೂ, ತಾವೇ ಸಚಿವರಿಗೆ ಖುದ್ದು ಮನವಿ ಮಾಡಿದರೂ ಸ್ಪಂದಿಸಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ರಾಜ್ಯವು 2024-25ರ ಆರ್ಥಿಕ ವರ್ಷಕ್ಕೆ ಅನುದಾನ ವರ್ಗಾವಣೆ ಪ್ರಮಾಣಪತ್ರಗಳನ್ನು ಒದಗಿಸಿರುವುದಲ್ಲದೆ, 2025ರ ಆಗಸ್ಟ್ ನೊಳಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆಗಳನ್ನು (ಜಿಪಿಡಿಪಿ) ಅಪ್ ಲೋಡ್ ಮಾಡುವ ಕಾರ್ಯವನ್ನೂ ಪೂರ್ಣಗೊಳಿಸಿದೆ. ಕೇಂದ್ರ ಪಂಚಾಯತ್ ಸಚಿವಾಲಯ ಕೇಳಿದ್ದ ಎಲ್ಲ ಪ್ರಶ್ನೆಗಳಿಗೂ ಪೂರಕವಾಗಿ ಉತ್ತರಿಸಿದೆ. ಆದರೂ ಕೇಂದ್ರ ಪಂಚಾಯತ್ ರಾಜ್ ಇಲಾಖೆ ತಂತ್ರಾಂಶದಲ್ಲಿನ ತೊಡಕುಗಳನ್ನು ಮುಂದಿಟ್ಟುಕೊಂಡು 15 ಹಣಕಾಸು ಆಯೋಗದ 2025-26 ರ ಸಾಲಿನ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಹೀಗಾಗಿ ರಾಜ್ಯದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯ ದೃಷ್ಟಿಯಿಂದ ರಾಜ್ಯದಿಂದ ಸಂಸದರಾಗಿ ಆಯ್ಕೆಯಾಗಿರುವ ತಾವು ಕೇಂದ್ರ ಪಂಚಾಯತ್ ರಾಜ್ ಸಚಿವರಿಗೆ ಮನವರಿಕೆ ಮಾಡಿಸಿ, ರಾಜ್ಯದ ಪಂಚಾಯತಿಗಳಿಗೆ ಬರಬೇಕಾದ 2186.20 ಕೋಟಿ ರೂ. ಹಣ ಬಿಡುಗಡೆ ಮಾಡಿಸುವಂತೆ ಈಶ್ವರ ಖಂಡ್ರೆ ಮನವಿ ಮಾಡಿದ್ದಾರೆ.
ಕೇಂದ್ರ ಸಚಿವರು, ಸಾಗರ್ ಖಂಡ್ರೆಗೂ ಪತ್ರ: ಕೇಂದ್ರ ಸಚಿವರುಗಳಾಗಿರುವ ರಾಜ್ಯದ ಸಂಸದರಾದ ನಿರ್ಮಲಾ ಸೀತಾರಾಮನ್, ಪ್ರಲ್ಹಾದ ಜೋಶಿ, ಎಚ್.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ತಮ್ಮ ಪುತ್ರ ಸಂಸದ ಸಾಗರ್ ಈ ಖಂಡ್ರೆ ಸೇರಿದಂತೆ ರಾಜ್ಯದಿಂದ ಲೋಕಸಭೆ ಮತ್ತು ರಾಜ್ಯಸಭೆಗೆ ಆಯ್ಕೆಯಾಗಿರುವ ಎಲ್ಲ ಸಂಸದರಿಗೂ ಈಶ್ವರ ಖಂಡ್ರೆ ಪತ್ರ ಬರೆದಿದ್ದಾರೆ. ರಾಜ್ಯದ ಹಿತದೃಷ್ಟಿಯಿಂದ ಎಲ್ಲ ಸಂಸದರೂ ಸಂಘಟಿತರಾಗಿ ಪ್ರಯತ್ನಿಸುವರೇ ಎಂಬುದನ್ನು ಕಾದು ನೋಡಬೇಕಿದೆ.

