ಅಪರಾಧ ಸುದ್ದಿ

ಬೆಂಗಳೂರು: ಪಿಜಿಯಲ್ಲಿ ಅಡುಗೆ ಸಿಲಿಂಡರ್ ಸ್ಫೋಟ; 10 ಮಂದಿಗೆ ಗಂಭೀರ ಗಾಯ

Share It

ಆನೇಕಲ್ (ಬೆಂಗಳೂರು): ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು 10 ಮಂದಿಗೆ ಗಂಭೀರ ಗಾಯಗಳಾಗಿರುವ ಘಟನೆ ಆನೇಕಲ್ ತಾಲೂಕಿನ ಬೊಮ್ಮಸಂದ್ರದಲ್ಲಿ ಗುರುವಾರ ಸಂಭವಿಸಿದೆ.

ಶ್ರೀ ಸಾಯಿ ಕಂಫರ್ಟ್​ ಪಿಜಿಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಸೌರವ್ ಚೌದರಿ, ಅಲಾವುದೀನ್, ಶಾಂತನುರಾಯ್, ಅಭಿಬುಲ್ ರೆಹ್ಮಾನ್, ಸುಬ್ರತಾ ಬೇರಾ, ದೇಬಶಿಶ್ ಹಲ್ದರ್ ಸೇರಿ 10 ಮಂದಿ ಗಾಯಗೊಂಡಿದ್ದಾರೆ. ಗಾಯಾಳು ಕಾರ್ಮಿಕರು ಪಶ್ಚಿಮ ಬಂಗಾಳ ಮೂಲದವರಾಗಿದ್ದು, ಸ್ಥಳೀಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸುಟ್ಟ ಗಾಯಗಳಿಂದ ನರಳಾಡುತ್ತಿದ್ದ ಅವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ರಾತ್ರಿ ಸಿಲಿಂಡರ್​​ನಲ್ಲಿ ಗ್ಲಾಸ್ ಲೀಕ್ ಆಗಿತ್ತು. ಬೆಳಗ್ಗೆ ಎದ್ದು ರೂಮಿನ ಲೈಟ್ ಆನ್ ಮಾಡುತ್ತಿದ್ದಂತೆ ಸ್ಫೋಟಗೊಂಡಿದೆ ಎನ್ನಲಾಗುತ್ತಿದೆ. ಸ್ಫೋಟದ ಬೆನ್ನಲ್ಲೇ ರೂಮ್​​ಗಳಲ್ಲಿ ಬೆಂಕಿ ಆವರಿಸಿಕೊಂಡಿದೆ. ಅಲ್ಲದೆ, ತೀವ್ರತೆಗೆ ರೂಮ್​ನಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಮನೆಯ ಬಾಗಿಲು, ಕಿಟಕಿ ಜಖಂಗೊಂಡಿವೆ.

ಸ್ಫೋಟ ಸಂಭವಿಸಿರುವ ಕಟ್ಟಡದಲ್ಲಿ 18 ಕೊಠಡಿಗಳಿವೆ. ಲಿಂಗರಾಜು ಎಂಬುವರು ಶ್ರೀ ಸಾಯಿ ಕಂಫರ್ಟ್ ಎಂಬ ಪಿಜಿ ನಡೆಸುತ್ತಿದ್ದರು. ಕಟ್ಟಡದ ಎರಡನೇ ಮಹಡಿಯಲ್ಲಿ ಸಿಲಿಂಡರ್ ಬ್ಲಾಸ್ಟ್​ ಆಗಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡಿದ್ದಾರೆ. ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಹೆಬ್ಬಗೋಡಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Share It

You cannot copy content of this page