ಅಪರಾಧ ಸುದ್ದಿ

ಕಪ್ಪು ಸಮುದ್ರದಲ್ಲಿ ದಾಳಿ: ಹಡಗಿನಲ್ಲಿ ಸಿಲುಕಿರುವ 13 ಭಾರತೀಯ ನಾವಿಕರಿಗೆ ಪ್ರಾಣಭಯ

Share It

ನವದೆಹಲಿ: ಕಪ್ಪು ಸಮುದ್ರದ ಚೋರ್ನೊಮೊರ್ಸ್ಕ್‌ನ ಉಕ್ರೇನಿಯನ್ ಬಂದರಿನಲ್ಲಿ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ಮಧ್ಯೆ 13 ಮಂದಿ ಭಾರತೀಯ ನಾವಿಕರು ಹಡಗಿನಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈ ಕುರಿತು ಫಾರ್ವರ್ಡ್ ಸೀಮೆನ್ಸ್ ಯೂನಿಯನ್ ಆಫ್ ಇಂಡಿಯಾ ತೀವ್ರ ಕಳವಳ ವ್ಯಕ್ತಪಡಿಸಿದೆ.

ಎಂ.ವಿ. ಅಮಿರ್‌1 ಹಡಗಿನಲ್ಲಿರುವ ಸಿಬ್ಬಂದಿ ಭಯಾನಕ ಮತ್ತು ಜೀವಕ್ಕೆ ಅಪಾಯಕಾರಿ ಪರಿಸ್ಥಿತಿಯಲ್ಲಿದ್ದಾರೆ ಎಂದು FSUI ಮಂಗಳವಾರ ರಾತ್ರಿ ಸಾಮಾಜಿಕ ಜಾಲತಾಣ ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದೆ. ಸಂಬಂಧಪಟ್ಟ ಎಲ್ಲ ಅಧಿಕಾರಿಗಳು, ಹಡಗಿನ ಮಾಲೀಕರು, ಧ್ವಜ ಹೊಂದಿರುವ ದೇಶ ಮತ್ತು ಭಾರತ ಸರ್ಕಾರ ತಕ್ಷಣ ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು. ಅವರನ್ನು ಮರಳಿ ಸುರಕ್ಷಿತವಾಗಿ ಕರೆ ತರಲು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಸಂಘಟನೆ ತುರ್ತು ಮನವಿ ಮಾಡಿದೆ.

ಹಡಗಿನ ಸುತ್ತಲಿನ ಪ್ರದೇಶದಲ್ಲಿ ಡ್ರೋನ್ ಹಾಗು ಕ್ಷಿಪಣಿ ದಾಳಿಗಳು ನಿರಂತರವಾಗಿ ನಡೆಯುತ್ತಿವೆ. ಯಾವುದೇ ಕ್ಷಣದಲ್ಲೂ ಈ ಹಡಗಿನ ಮೇಲೆ ನೇರ ದಾಳಿಯಾಗುವ ಭೀತಿ ಇದೆ. ಆ ಆತಂಕದಲ್ಲೇ ಸಿಬ್ಬಂದಿ ಬದುಕುತ್ತಿದ್ದಾರೆ ಎಂದು ತಿಳಿಸಿದೆ. ಕಪ್ಪು ಸಮುದ್ರದಲ್ಲಿ ಪಲಾವ್ ಧ್ವಜ ಹೊಂದಿರುವ ಸರಕು ಸಾಗಣೆ ಹಡಗು ಎಂವಿ ಎಜಿಎನ್ ರಾಗ್ನರ್ ಮೇಲೆ ಡ್ರೋನ್ ದಾಳಿ ನಡೆದ ನಂತರ ಕಾಣೆಯಾದ ಇಬ್ಬರು ಭಾರತೀಯ ನಾವಿಕರನ್ನು ಪತ್ತೆ ಹಚ್ಚಲು ಕೇಂದ್ರ ಸರ್ಕಾರ ಉಕ್ರೇನ್‌ನ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದು, ಇದರ ನಡುವೆ 13 ಭಾರತೀಯ ನಾವಿಕರು ಸಂಕಷ್ಟದಲ್ಲಿರುವ ವರದಿ ಬಂದಿದೆ.

ಉಕ್ರೇನ್ ಯುದ್ಧ ಈಗ ಸಮುದ್ರ ಹಡಗು ಮಾರ್ಗಗಳಿಗೆ ಬಾಧಿಸಿದ್ದು, ಭಾರತೀಯ ನಾವಿಕರು ಕಪ್ಪು ಸಮುದ್ರದಲ್ಲಿ ದಾಳಿಗೆ ಗುರಿಯಾಗಿದ್ದಾರೆ. ಬಿಮ್ಕೊ-ಐಸಿಎಸ್ ಸೀಫೇರರ್ ವರ್ಕ್‌ಫೋರ್ಸ್ ವರದಿ 2026 ಪ್ರಕಾರ, ಫಿಲಿಪ್ಪೀನ್ಸ್ ನಂತರ ಭಾರತ ವಾಣಿಜ್ಯ ಹಡಗು ಸಾಗಣೆಗೆ ನಾವಿಕರನ್ನು ಪೂರೈಸುವ ವಿಶ್ವದ 2ನೇ ಅತಿದೊಡ್ಡ ದೇಶ. ಇದು ಸಮುದ್ರಯಾನ ಕಾರ್ಯಪಡೆಯಲ್ಲಿ ಶೇ.12.2ರಷ್ಟು ಪಾಲು ಹೊಂದಿದೆ. ಕೇಂದ್ರ ಸರ್ಕಾರ ಹಡಗುಗಳಲ್ಲಿನ ಭಾರತೀಯ ನಾವಿಕರ ಡೇಟಾಬೇಸ್ ರಚಿಸಲು ಯೋಜಿಸಿದೆ.

ಇದೇ ವೇಳೆ, ಕಪ್ಪು ಸಮುದ್ರ ಪ್ರದೇಶದಲ್ಲಿ ಉದ್ಯೋಗಗಳನ್ನು ಆರಿಸುವ ಬಗ್ಗೆ ಜಾಗರೂಕರಾಗಿರಲು ನಾವಿಕರಿಗೆ ಮನವಿ ಮಾಡಿದೆ. ಸರಕು ಸಾಗಣೆ ಹಡಗುಗಳ ಮೇಲಿನ ದಾಳಿಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಭಾರತ, ಯುದ್ಧದಲ್ಲಿ ಭಾಗಿಯಾಗಿರುವ ಉಕ್ರೇನ್ ಮತ್ತು ರಷ್ಯಾ ಎರಡೂ ದೇಶಗಳೆದುರು ತನ್ನ ಪ್ರತಿಭಟನೆಗಳನ್ನು ಸಲ್ಲಿಸಿದೆ.


Share It

You cannot copy content of this page