ಅಪರಾಧ ಸುದ್ದಿ

ಮೈಸೂರು: ಇಟ್ಟಿಗೆಗಳ ರಾಶಿ ಕುಸಿದು ಮೂವರು ಕಾರ್ಮಿಕರು ಸಾವು

Share It

ಮೈಸೂರು: ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡುವಾಗ, ಇಟ್ಟಿಗೆಗಳು ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ತಿ.ನರಸೀಪುರ ತಾಲೂಕಿನಲ್ಲಿ ನಡೆದಿದೆ.

ಬೂದಳ್ಳಿ ಗ್ರಾಮದ ರಾಜೇಶ್ (32), ನಾಗರಾಜು (35) ಹಾಗೂ ನಾರಾಯಣ್ (40)​ ಮೃತ ಕಾರ್ಮಿಕರು. ಇಟ್ಟಿಗೆಗೂಡಿನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಮೂವರು ಬೇಯಿಸಿದ್ದ ಇಟ್ಟಿಗೆಗಳನ್ನು ತೆಗೆಯುವ ವೇಳೆ ಏಕಾಏಕಿ ಇಟ್ಟಿಗೆಗಳ ರಾಶಿ ಅವರ ಮೇಲೆ ಕುಸಿದು ಬಿದ್ದಿದೆ. ಇದರಿಂದ ರಾಜೇಶ್ ಮತ್ತು ನಾರಾಯಣ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ನಾಗರಾಜು ಅವರನ್ನು ಮೈಸೂರಿನ ಕೆ.ಆ‌ರ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿ. ನರಸೀಪುರ ಪೊಲೀಸರು ಮಾಹಿತಿ ನೀಡಿದ್ದಾರೆ.

ಕೂಲಿ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದ ಮೂವರು, ಎಲ್ಲಿ ಕೂಲಿಗೆ ಕರೆದರು ಒಟ್ಟಿಗೆ ಹೋಗುತ್ತಿದ್ದರು. 15 ದಿನಗಳಿಂದ ಹಿಂದೆ ಸಿದ್ದರಾಜು ಎಂಬುವವರ ಇಟ್ಟಿಗೆಗೂಡಿಗೆ ಇಟ್ಟಿಗೆ ಕೆಲಸ ಮಾಡಲು ಹೋಗುತ್ತಿದ್ದರು. ಶನಿವಾರ ಇಟ್ಟಿಗೆಗೂಡಿನಲ್ಲಿ ಕೆಲಸ ಮಾಡುವಾಗ ಇಟ್ಟಿಗೆ ತೆಗೆಯಲು ರಾಜೇಶ್ ಮತ್ತು ನಾರಾಯಣ್ ಮುಂದಾಗಿದ್ದಾರೆ. ಒಂದೇ ಸಮನೆ ಇಟ್ಟಿಗೆ ಬೀಳಲು ತೊಡಗಿದ್ದರಿಂದ ಇವರಿಬ್ಬರು ಇಟ್ಟಿಗೆ ಕೆಳಗೆ ಸಿಲುಕಿದ್ದರು. ಈ ಘಟನೆ ನೋಡಿದ ನಾಗರಾಜ್ ಇಬ್ಬರನ್ನೂ ಕಾಪಾಡಲು ಹೋಗಿ, ಆತ ಸಹ ಇಟ್ಟಿಗೆ ಅಡಿಯಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದರು.

ಇಟ್ಟಿಗೆಗಳ ಹೊಡೆತ ಹಾಗೂ ಭಾರದಿಂದ ರಾಜೇಶ್ ಮತ್ತು ನಾರಾಯಣ್ ಸ್ಥಳದಲ್ಲಿಯೇ ಮೃತಪಟ್ಟರು. ಗಂಭೀರವಾಗಿ ಗಾಯಗೊಂಡಿದ್ದ ನಾಗರಾಜು ಅವರು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು. ಮೂವರ ಮೃತದೇಹಗಳನ್ನು ಕೆ.ಆರ್.ಆಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ನೀಡಲಾಗುವುದು.

ಘಟನೆ ಬಳಿಕ ಇಟ್ಟಿಗೆಗೂಡು ಮಾಲೀಕ ಸಿದ್ದರಾಜು ನಾಪತ್ತೆಯಾಗಿದ್ದು, ಈತನ ವಶಕ್ಕೆ ಪಡೆದು ವಿಚಾರಣೆ ನಡೆಸಿದ ನಂತರ ಹೆಚ್ಚಿನ ಮಾಹಿತಿ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ತಿ.ನರಸೀಪುರ ಪೊಲೀಸರು ಪರಿಶೀಲನೆ ನಡೆಸಿದ್ದು, ಈ ಸಂಬಂಧ ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ. ಮೃತರ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.


Share It

You cannot copy content of this page