ಬೆಂಗಳೂರು: ಕಾಕ್ರೋಚ್ ಪಾರ್ಟಿಯ ಮೂಲಕ ದೇಶದಲ್ಲಿ ಯುವಜನರ ಮೂಲಕ ಸಂಚಲನ ಸೃಷ್ಟಿಸಿದ ಅಭಿಜಿತ್ ದೀಪ್ಕೆ ವಿರುದ್ಧ ಇದೀಗ ಆರ್‌ಟಿಐ ಕಾರ್ಯಕರ್ತರ ಆರ್ಭಟ ಶುರುವಾಗಿದೆ.
ಗುಜರಾತ್‌ನ ಸೂರತ್ ಮೂಲದ ಆರ್‌ಟಿಐ ಕಾರ್ಯಕರ್ತ ಅಮಿತ್ ತಿವಾರಿ, ಅಭಿಜಿತ್ ದೀಪ್ಕೆ ಕುಟುಂಬದ ಆರ್ಥಿಕ ಮೂಲದ ಕುರಿತು ತನಿಖೆ ನಡೆಸುವಂತೆ ಕೋರಿ, ಚುನಾವಣಾ ಆಯೋಗ, ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ ಹಾಗೂ ಮಹಾರಾಷ್ಟ್ರ ಸರಕಾರಕ್ಕೆ ಪ್ರತ್ಯೇಕವಾಗಿ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.
ಸಿಜೆಪಿ ಕಾನೂನು ಬದ್ಧ ಸ್ಥಾನಮಾನ ಪಡೆಯುವ ಮೊದಲೇ ಅವರ ಹೋರಾಟ ಮತ್ತು ಸಂರಚನೆಗೆ ಕಪಿಲ್ ಸಿಬಿಲ್ ಅವರು ಒಂದು ಕೋಟಿ ದೇಣಿಗೆ ನೀಡುವುದಾಗಿ ಘೋಷಿಸಿದ್ದು, ಇದು ಜನಪ್ರತಿನಿಧಿಗಳ ಕಾಯ್ದೆಯ ಪ್ರಕಾರ ಅಕ್ರಮ ಎಂದು ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಅಂತೆಯೇ ಅವರು ನೀಡಿರುವ ಒಂದು ಕೋಟಿ ರುಪಾಯಿ ಹಣದಲ್ಲಿ ಶೇ.18ರಷ್ಟು ಜಿಎಸ್‌ಟಿ ಕಡಿತಗೊಳಿಸಬೇಕು ಎಂದು ಆಗ್ರಹಿಸಿ, ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ ಮಂಡಳಿಗೆ ಪತ್ರೆ ಬರೆದು ದೂರು ಸಲ್ಲಿಸಿದ್ದಾರೆ.
ಮಹಾರಾಷ್ಟ್ರದ ಕೈಗಾರಿಕಾ ಅಭಿವೃದ್ಧಿ ನಿಗಮದಲ್ಲಿ ಜೂನಿಯರ್ ಎಂಜಿನಿಯರ್ ಆಗಿರುವ ದೀಪ್ಕೆ ತಂದೆ ಅವರ ಆಸ್ತಿಗಳ ಕುರಿತು ತನಿಖೆ ನಡೆಸಬೇಕು ಎಂದು ಮಹಾರಾಷ್ಟ್ರ ಸರಕಾರಕ್ಕೆ ತಿವಾರಿ ಪತ್ರ ಬರೆದಿದ್ದಾರೆ. ಭಗವಾನ್ ರಾವ್ ದೀಪ್ಕೆ 60000-65000 ವೇತನ ಪಡೆಯುತ್ತಿದ್ದು, ಅಮೆರಿಕದಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಹೇಗೆ ಸಾಧ್ಯವಾಯಿತು ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಅವರು ಸರಕಾರಿ ಇಲಾಖೆಯಲ್ಲಿದ್ದು, ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದರೆ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿರುವ ತಿವಾರಿ, ಪ್ರತಿಭಟನೆ ಹೆಸರಿನಲ್ಲಿ ಮೋದಿ ಮತ್ತು ಅವರ ತಾಯಿಗೆ ಅವಹೇಳನ ಮಾಡಿದ್ದನ್ನು ವಿರೋಧಿಸಿ ಹೇಳಿಕೆ ನೀಡಿದ್ದಾರೆ.
ತಿವಾರಿ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಇದು ರಾಜಕೀಯ ಪ್ರೇರಿತ ದೂರಾಗಿದ್ದು, ಸರಕಾರದ ವಿರುದ್ಧ ಪ್ರತಿಭಟನೆ ಸಂಘಟಿಸಿದ್ದರ ವಿರುದ್ಧ ಸೇಡು ತೀರಿಸಿಕೊಳ್ಳುವ ಷಡ್ಯಂತ್ರ ನಡೆಯುತ್ತಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು ನಿಜವೇ ಆಗಿದ್ದರೆ, ತನಿಖೆಯಾಗಲಿ ಎಂದು ಹೇಳಿದ್ದಾರೆ.

