ಬೆಂಗಳೂರು: ಮನೆಯಲ್ಲಿ ತಂದೆ – ಮಗನ ಮೃತದೇಹಗಳು ಪತ್ತೆಯಾದ ಘಟನೆ ಬೆಂಗಳೂರಿನ ಚಿಕ್ಕಬಾಣಾವರ ಠಾಣೆ ವ್ಯಾಪ್ತಿಯ ಗುಡ್ಡೆಬಸವಪುರದಲ್ಲಿ ಘಟನೆ ನಡೆದಿದ್ದು, ಖಾಸಗಿ ಕಂಪನಿ ಉದ್ಯೋಗಿ ಅಭಿನಂದನ್ (35) ಹಾಗೂ ಅವರ ಮಗ ಯದುವೀರ್ (5) ಮೃತ ದೇಹಗಳು ಮನೆಯಲ್ಲಿ ಪತ್ತೆಯಾಗಿವೆ.
ಕುಣಿಗಲ್ ಮೂಲದ ಅಭಿನಂದನ್, ತಮ್ಮ ಪತ್ನಿ ಮತ್ತು ಮಗನೊಂದಿಗೆ ಗುಡ್ಡೆಬಸವಪುರದ ಮನೆಯಲ್ಲಿ ವಾಸಿಸುತ್ತಿದ್ದರು. ಸೋಮವಾರ ಬೆಳಿಗ್ಗೆ ಅಭಿನಂದನ್ ಪತ್ನಿ ಹರಿಣಿ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ. ನಾವು ಸಂಬಂಧಿಕರ ಮನೆಗೆ ತೆರಳಿದ್ದು, ಭಾನುವಾರ ಸಂಜೆ ವಾಪಸಾಗಿದ್ದೆವು. ಸೋಮವಾರ ಬೆಳಿಗ್ಗೆ ಎದ್ದಾಗ ಪತಿ ಮತ್ತು ಮಗ ಸ್ಪಂದಿಸದೆ ಬಿದ್ದಿರುವುದು ಕಂಡುಬಂತು ಎಂದು ಹರಿಣಿ ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದಿದ್ದಾರೆ. ದೇಹಗಳ ಮೇಲೆ ಯಾವುದೇ ದೊಡ್ಡ ಗಾಯಗಳು ಕಂಡುಬಂದಿಲ್ಲ. ಆದರೆ, ಸಣ್ಣಪುಟ್ಟ ಗಾಯದ ಗುರುತುಗಳು ಪತ್ತೆಯಾಗಿವೆ. ಸಾವಿಗೆ ನಿಖರ ಕಾರಣ ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ತಿಳಿಯಲಿದೆ. ಇಬ್ಬರ ಮೊಬೈಲ್ ಫೋನ್ಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪೊಲೀಸ್ ಸಹಾಯವಾಣಿಗೆ ಬಂದ ಕರೆ ಆಧರಿಸಿ ಚಿಕ್ಕಬಾಣಾವರದ ಸಿಬ್ಬಂದಿ ತೆರಳಿ ಪರಿಶೀಲನೆ ಮಾಡಿದ್ದಾರೆ. ಅಲ್ಲಿ ಕೆಲವು ಸಂಶಯಾಸ್ಪದವಾದ ಅಂಶಗಳು ಕಂಡು ಬಂದಿವೆ. ಮೃತ ಅಭಿನಂದನ್ ಅವರ ತಾಯಿ ಇದೊಂದು ಹತ್ಯೆ ಪ್ರಕರಣ ಎಂದು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಹತ್ಯೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನ ಮುಂದುವರೆಸಿದ್ದೇವೆ.
ಮನೆಯಲ್ಲಿ ಸಿಸಿಟಿವಿ ಇನ್ಸ್ಟಾಲ್ ಮಾಡಲಾಗಿದೆ. ಅದನ್ನ ಪರಿಶೀಲನೆ ಮಾಡಿದಾಗ ಫೂಟೇಜ್ ಸರಿಯಾಗಿ ಸೇವ್ ಆಗಿಲ್ಲ ಎಂದು ಕಂಡುಬಂದಿದೆ. ಉದ್ದೇಶಪೂರ್ವಕವಾಗಿ ಸಿಸಿಟಿವಿ ಆಫ್ ಮಾಡಲಾಗಿತ್ತಾ? ಎಂಬ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಅಲ್ಲದೇ ತನಿಖೆಯ ಭಾಗವಾಗಿ ಮೃತರ ಪತ್ನಿಯನ್ನ ಕೂಡ ವಿಚಾರಣೆ ಮಾಡಲಾಗುತ್ತಿದೆ ಎಂದು ಬೆಂಗಳೂರು ವಾಯುವ್ಯ ವಿಭಾಗದ ಡಿಸಿಪಿ ನಾಗೇಶ್ ಡಿ.ಎಲ್ ತಿಳಿಸಿದ್ದಾರೆ.

