ಅಪರಾಧ ಸುದ್ದಿ

ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ₹14.95 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ವಸ್ತು ಕಳ್ಳತನ

Share It

ಮಂಗಳೂರು: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿಲ್ಪಾಡಿ ಗ್ರಾಮದ ಕೊರ್ದಬ್ಬುಯ ದೈವಸ್ಥಾನದಲ್ಲಿ ಕಳ್ಳರು ಕೈಚಳಕ ತೋರಿದ್ದು, ದೈವದ ಬೆಳ್ಳಿಯ ಮುಖವಾಡ, ಬೆಳ್ಳಿಯ ಕವಚವಿರುವ ಖಡ್ಗ ಹಾಗೂ ಚಿನ್ನಾಭರಣಗಳು ಸೇರಿದಂತೆ ಅಂದಾಜು ರೂ. 14,95,000 ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ ಎಂದು ಮಂಗಳೂರು ನಗರ ಪೊಲೀಸ್ ಪ್ರಕಟಣೆ ತಿಳಿಸಿದೆ.

ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ಅರ್ಚಕರಾಗಿರುವ ಕಿಶೋರ್ ಅವರು ಸೆಪ್ಟೆಂಬರ್ 1ರಂದು ಸಂಜೆ 6 ಗಂಟೆಗೆ ದೈವಕ್ಕೆ ನಿತ್ಯ ಪೂಜೆ ನೆರವೇರಿಸಿದ್ದರು. ಆ ವೇಳೆ ದೈವದ ಎಲ್ಲಾ ಆಭರಣಗಳು ಸ್ಥಳದಲ್ಲೇ ಇದ್ದವು. ಪೂಜೆ ಮುಗಿಸಿ ಸಂಜೆ 7 ಗಂಟೆಗೆ ದೈವಸ್ಥಾನದ ಬಾಗಿಲಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ಮರುದಿನ, ಅಂದರೆ ಸೆಪ್ಟೆಂಬರ್ 2ರಂದು ಬೆಳಗ್ಗೆ 7 ಗಂಟೆಗೆ ಪೂಜೆಗಾಗಿ ದೈವಸ್ಥಾನಕ್ಕೆ ಬಂದಾಗ ಮುಖ್ಯ ದ್ವಾರದ ಬೀಗ ತುಂಡರಿಸಿ ಕೆಳಗೆ ಬಿದ್ದಿರುವುದು ಹಾಗೂ ಚಿಲಕ ಹಾಕಿದ ಸ್ಥಿತಿಯಲ್ಲಿದ್ದದ್ದು ಕಂಡುಬಂದಿದೆ. ಒಳಗೆ ತೆರಳಿ ಪರಿಶೀಲಿಸಿದಾಗ ಗರ್ಭಗುಡಿಯಲ್ಲಿದ್ದ ಕೊರ್ದಬ್ಬು ದೈವದ ಮೂರ್ತಿಯ ಆಭರಣಗಳು ಕಳವಾಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.

ಕಳವಾದ ಸೊತ್ತುಗಳ ವಿವರ: ದಿನಾಂಕ 01-09-2026ರ ಸಂಜೆ 7:00 ಗಂಟೆಯಿಂದ 02-09-2026ರ ಬೆಳಗ್ಗೆ 7:00 ಗಂಟೆಯ ಮಧ್ಯಾವಧಿಯಲ್ಲಿ ದುಷ್ಕರ್ಮಿಗಳು ಯಾವುದೋ ಸಾಧನದಿಂದ ಬೀಗ ಮುರಿದು ಒಳನುಗ್ಗಿ ಹಲವು ಸೊತ್ತುಗಳನ್ನು ದೋಚಿದ್ದಾರೆ.

ಒಟ್ಟಾರೆಯಾಗಿ ಸುಮಾರು 11 ಕೆ.ಜಿ. ಬೆಳ್ಳಿ ಹಾಗೂ 5 ಪವನ್ ಬಂಗಾರದ ಆಭರಣಗಳು ಕಳವಾಗಿದ್ದು, ಇವುಗಳ ಒಟ್ಟು ಅಂದಾಜು ಮೌಲ್ಯ ರೂ 14,95,000 ಎಂದು ಅಂದಾಜಿಸಲಾಗಿದೆ.

ಅರ್ಚಕ ಕಿಶೋರ್ ಅವರು ನೀಡಿದ ದೂರಿನ ಮೇರೆಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.


Share It

You cannot copy content of this page