ಬೆಂಗಳೂರು: ಗೌರಿ ಗಣೇಶ ಹಬ್ಬದ ಅಂಗವಾಗಿ ಪ್ರಯಾಣಿಕರ ಅನುಕೂಲಕ್ಕೆ ksrtc ಒಂದು ಸಾವಿರ ವಿಶೇಷ ಬಸ್ ಗಳನ್ನು ಓಡಿಸಲು ತೀರ್ಮಾನಿಸಿದೆ.
ಈ ಕುರಿತು ಪ್ರಕಟಣೆ ಹೊರಡಿಸಿದ್ದು, 11 ಸೆಪ್ಟೆಂಬರ್ ಶುಕ್ರವಾರದಿಂದಲೇ ಬಸ್ ಗಳು ಕಾರ್ಯಾಚರಣೆ ನಡೆಸಲಿವೆ. ಬೆಂಗಳೂರಿನಿಂದ ಈ ಮೂರು ದಿನಗಳ ಕಾಲ ವಿಶೇಷ ಬಸ್ ಸಂಚರಿಸಲಿದ್ದು, 14 ರಂದು ವಿವಿಧ ನಗರಗಳಿಂದ ಬೆಂಗಳೂರಿಗೆ ವಿಶೇಷ ಬಸ್ ಸೌಲಭ್ಯ ಒದಗಿಸಲಾಗಿದೆ.
ಕೆಂಪೇಗೌಡ ಬಸ್ ನಿಲ್ದಾಣದಿಂದ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಶಿವಮೊಗ್ಗ, ಹಾಸನ, ಮಂಗಳೂರು, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ, ವಿಜಯವಾಡ, ಹೈದರಾಬಾದ್ ಮೊದಲಾದ ಸ್ಥಳಗಳಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ.
ಮೈಸೂರು ರಸ್ತೆ ಸ್ಯಾಟಲೈಟ್ ನಿಲ್ದಾಣದಿಂದ ಮೈಸೂರು, ಮಂಡ್ಯ, ಪಿರಿಯಾಪಟ್ಟಣ, ಮಡಿಕೇರಿ, ಚಾಮರಾಜನಗರ ಸೇರಿ ಪ್ರಮುಖ ಸ್ಥಳಗಳಿಗೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಅದೇ ರೀತಿ ಶಾಂತಿನಗರದಿಂದ ತಮಿಳುನಾಡಿನ ಸೇಲಂ, ಧರ್ಮಪುರಿ, ಕುಂಭಕೋಣಂ, ಚೆನ್ನೆ, ಮಧುರೈ, ಕೊಯಂಬತೂರು ಸೇರಿ ಪ್ರಮುಖ ಸ್ಥಳಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ಮುಂಗಡ ಬುಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ನಾಲ್ಕಕ್ಕಿಂತ ಹೆಚ್ಚು ಪ್ರಯಾಣಿಕರಿಗೆ ಟಿಕೆಟ್ ಕಾಯ್ದಿರಿಸಿದರೆ ಶೇ.5 ಹಾಗೂ ಹೋಗುವ ಹಾಗೂ ಬರುವ ಎರಡು ಕಡೆಯ ಟಿಕೆಟ್ ಕಾಯ್ದಿರಿಸಿದರೆ, ಶೇ 10 ರಷ್ಟು ರಿಯಾಯಿತಿ ನೀಡಲು ಸಂಸ್ಥೆ ತೀರ್ಮಾನಿಸಿದೆ.

