ಅಪರಾಧ ಸುದ್ದಿ

ಅಪ್ರಾಪ್ತೆಯ ಜತೆಗೆ ಸಮ್ಮತಿಯ ಲೈಂಗಿಕ ಕ್ರಿಯೆಯೂ ಕಾನೂನುಬದ್ಧವಲ್ಲ ‘: ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ, ದಂಡ !

Share It

ಬೆಂಗಳೂರು: ಬಾಲಕಿಯೊಂದಿಗೆ ನಡೆಯುವ ಸಮ್ಮತಿಯ ಲೈಂಗಿಕ ಕ್ರಿಯೆಯು ಕಾನೂನಿನ ದೃಷ್ಟಿಯಲ್ಲಿ ಮಾನ್ಯವಾಗುವುದಿಲ್ಲ. ಸಂತ್ರಸ್ತೆಯ ಸಮ್ಮತಿ ಸಿಕ್ಕಿದೆ ಎಂಬ ಕಾರಣಕ್ಕೆ ಕ್ರಿಮಿನಲ್‌ ಆರೋಪದಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. 

ಪೋಕ್ಸೋ ಆರೋಪಿಯನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿ, ಆರೋಪಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ಒಂದು ಲಕ್ಷದ ಐದು ಸಾವಿರ ರೂಪಾಯಿ ದಂಡ ವಿಧಿಸಿದೆ. ಮಂಡ್ಯದ ಸೆಷನ್ಸ್ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿದ್ದ ಆದೇಶ ಪ್ರಶ್ನಿಸಿ ಸಂತ್ರಸ್ತೆಯ ಪೋಷಕರು ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಹಾಗೂ ನ್ಯಾಯಮೂರ್ತಿ ಬಿ. ಪ್ರಮೋದ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಈ ಆದೇಶ ನೀಡಿದೆ.

ಅಲ್ಲದೆ, ಸಂತ್ರಸ್ತೆಯ ಜನನ ಪ್ರಮಾಣಪತ್ರ ಹಾಗೂ ಎಸ್ಎಸ್ಎಲ್ ಸಿ ಅಂಕಪಟ್ಟಿ ಪ್ರಕಾರ ಘಟನೆ ನಡೆದಾಗ ಬಾಲಕಿಗೆ 16 ವರ್ಷ ವಯಸ್ಸಾಗಿತ್ತು ಎಂಬುದು ಸಾಬೀತಾಗಿದೆ. ಹೀಗಾಗಿ ಆಕೆ ಪೋಕ್ಸೋ ಕಾಯ್ದೆಯಡಿ ಅಪ್ರಾಪ್ತೆಯಾಗಲಿದ್ದಾರೆ. ಬಾಲಕಿ 18 ವರ್ಷಕ್ಕಿಂತ ಕಡಿಮೆಯಿದ್ದಾಗ ಆಕೆಯ ಸಮ್ಮತಿ ಇದೆಯೋ, ಇಲ್ಲವೋ ಎಂಬುದು ಕಾನೂನಿನಲ್ಲಿ ಮುಖ್ಯವಾಗುವುದಿಲ್ಲ. ಅಪ್ರಾಪ್ತೆಯ ಸಮ್ಮತಿಯನ್ನು ರಕ್ಷಣೆಯಾಗಿ ಪಡೆಯಲು ಆರೋಪಿಗೆ ಯಾವುದೇ ಹಕ್ಕಿರುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಪ್ರಕರಣದ ವಿಚಾರಣೆ ನಡೆಸಿ ವಿಚಾರಣಾ ನ್ಯಾಯಾಲಯದಲ್ಲಿ ಆರೋಪಿ ಮತ್ತು ಸಂತ್ರಸ್ತೆಯ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಎಫ್ಎಸ್ಎಲ್ ಗೆ ಕಳುಹಿಸಲಾಗಿತ್ತು. ಡಿಎನ್ಎ ಪರೀಕ್ಷಾ ವರದಿಯು ಗರ್ಭಪಾತಗೊಳಿಸಿದ ಭ್ರೂಣಕ್ಕೆ ಆರೋಪಿಯೇ ಜೈವಿಕ ತಂದೆ ಮತ್ತು ಸಂತ್ರಸ್ತೆಯೇ ಜೈವಿಕ ತಾಯಿ ಎಂಬುದನ್ನು ನಿಖರವಾಗಿ ದೃಢಪಡಿಸಿದೆ. ಆದರೂ, ವಿಚಾರಣಾ ನ್ಯಾಯಾಲಯ ಸಂತ್ರಸ್ತೆಯ ವಯಸ್ಸು ಮತ್ತು ಡಿಎನ್ಎ ಸಾಕ್ಷ್ಯಗಳನ್ನು ಸರಿಯಾಗಿ ಪರಿಗಣಿಸದೆ, ಆರೋಪಿಯನ್ನು ಖುಲಾಸೆ ಮಾಡಿರುವುದು ಕಾನೂನುಬಾಹಿರ ಹಾಗೂ ತಪ್ಪು ನಿರ್ಧಾರ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.

ಅಲ್ಲದೆ, ವಿಚಾರಣಾ ನ್ಯಾಯಾಲಯ ಸುಪ್ರೀಂಕೋರ್ಟ್‌ನ ಹಳೆಯ ಆದೇಶಗಳನ್ನು ಪರಿಗಣಿಸಿದ್ದು, ಫೋಕ್ಸೋ ಕಾಯ್ದೆ ಜಾರಿ ಮಾಡಿರುವ ಉದ್ದೇಶವನ್ನು ಅರ್ಥೈಸಿಕೊಂಡಿಲ್ಲ ಎಂದಿರುವ ಪೀಠ, ಪೋಕ್ಸೋ ಸೆಕ್ಷನ್ 6 ಮತ್ತು ಐಪಿಸಿ 376ರ ಅಡಿಯಲ್ಲಿ ಆರೋಪಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1,00,000 ರೂ. ದಂಡ ವಿಧಿಸಿದೆ. ಕಿಡ್ನ್ಯಾಪ್ ಮಾಡಿದ ಆರೋಪದಲ್ಲಿ 5,000 ರೂ. ದಂಡ ಹಾಕಲಾಗಿದ್ದು, ದಂಡದ ರೂಪದಲ್ಲಿ ಸಂಗ್ರಹಿಸುವ 1,05,000 ರೂ.ಗಳಲ್ಲಿ 90,000 ರೂ.ಗಳನ್ನು ಸಂತ್ರಸ್ತ ಬಾಲಕಿಗೆ ಪರಿಹಾರವಾಗಿ ನೀಡಬೇಕು. ಇನ್ನುಳಿದ 15,000 ಹಣವನ್ನು ಸರ್ಕಾರಕ್ಕೆ ಜಮಾ ಮಾಡಬೇಕು ಎಂದು ಆದೇಶಿಸಿದೆ.


Share It

You cannot copy content of this page