ಸುದ್ದಿ

ಮೀಸಲಾತಿ ಸಂಬಂಧ ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ ಕರೆದೊಯ್ಯಲು ಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ಟ್ರಸ್ಟ್ ಮನವಿ

Share It

ಬೆಂಗಳೂರು: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಿಸಿದ ರಾಜ್ಯ ಸರ್ಕಾರದ ಅಧಿಸೂಚನೆಯನ್ನು ಹೈಕೋರ್ಟ್ ವಜಾಗೊಳಿಸಿರುವ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಬೇಕು. ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಬಳಿಗೆ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಬೇಕು” ಎಂದು ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ಟ್ರಸ್ಟ್ ಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಮನವಿ ಮಾಡಿದೆ.

ಸಿಎಂ ಡಿ ಕೆ ಶಿವಕುಮಾರ್ ಅವರನ್ನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಚಿವರು ಹಾಗೂ ಶಾಸಕರು ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಸಂಜೆ ಭೇಟಿ ಮಾಡಿ ಮನವಿ ಸಲ್ಲಿಸಿದರು.

ಹರಿಹರ ತಾಲ್ಲೂಕಿನ ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಜಗದ್ಗುರುಗಳಾದ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮೀಜಿ, ಸಚಿವರಾದ ಸತೀಶ್ ಜಾರಕಿಹೊಳಿ, ಟಿ ರಘುಮೂರ್ತಿ, ಶಿವರಾಜ ತಂಗಡಗಿ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕರಾದ ಬಸನಗೌಡ ದದ್ದಲ, ಅನ್ನಪೂರ್ಣ ತುಕಾರಾಂ, ಡಾ. ಶ್ರೀನಿವಾಸ್‌ ಮತ್ತಿತರರು ಇದ್ದರು.

ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪನೆಗೆ ಕೋರಿಕೆ: ಕರ್ನಾಟಕ ರಾಜ್ಯದ 50 ಬುಡಕಟ್ಟುಗಳು ಪರಿಶಿಷ್ಟ ಪಂಗಡವೆಂದು ಗುರುತಿಸಲಾಗಿದ್ದು ಅವುಗಳು ತುಂಬಾ ವೈವಿಧ್ಯತೆಯಿಂದ ಕೂಡಿರುತ್ತವೆ. ಇಷ್ಟೊಂದು ವೈವಿಧ್ಯತೆಯಿಂದ ಬುಡಕಟ್ಟುಗಳನ್ನು ಹೊಂದಿರುವ ಕರ್ನಾಟಕ ರಾಜ್ಯದಲ್ಲಿ ಬುಡಕಟ್ಟು ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಅವಶ್ಯಕತೆ ಇದ್ದು, ಒಂದು ಸುಸಜ್ಜಿತ ಬುಡಕಟ್ಟು ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕು ಎಂದು ಮನವಿ ಮಾಡಿದರು.

ನಕಲಿ ಜಾತಿ ಪ್ರಮಾಣ ಪತ್ರ ತಡೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಮನವಿ: ಕೇಂದ್ರ ಸರ್ಕಾರದ ಅಧಿಸೂಚನೆ ಪ್ರಕಾರ ‘ನಾಯಕ (ಪರಿವಾರ ಮತ್ತು ತಳವಾರ ಸೇರಿದಂತೆ)’ ಸಮುದಾಯಗಳನ್ನು ಎಸ್ಟಿ ಪಟ್ಟಿಗೆ ಸೇರಿಸಲಾಗಿದೆ. ಆದರೆ, ಹಿಂದುಳಿದ ವರ್ಗಗಳ ಪ್ರವರ್ಗ-1 ರಲ್ಲ ಸೇರಿದ ಕೆಲವರು ಹಾಗೂ ಬೀದರ್, ಕಲ್ಬುರ್ಗಿ, ಯಾದಗಿರಿ, ರಾಯಚೂರು, ಬೆಳಗಾವಿ ಮುಂತಾದ ಜಿಲ್ಲೆಗಳಲ್ಲಿ ಗೊಂಡ ಮತ್ತು ಟೋಕರೆಕೋಲಿ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆದು ನಿಜವಾದ ಎಸ್ಟಿ ಸಮುದಾಯಕ್ಕೆ ವಂಚಿಸುತ್ತಿದ್ದಾರೆ. ಈ ಬಗ್ಗೆ ಕಟ್ಟುನಿಟ್ಟಿನ ತನಿಖೆ ನಡೆಸಿ ಅರ್ಹರಿಗೆ ಮಾತ್ರ ಎಸ್ಟಿ ಜಾತಿ ಹಾಗೂ ಸಿಂಧುತ್ವ ಪ್ರಮಾಣ ಪತ್ರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮತ್ತು ತಹಶೀಲ್ದಾರರಿಗೆ ಸ್ಪಷ್ಟ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದರು.

ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪನೆಗೆ ವಿಶೇಷ ಅನುದಾನ ನೀಡಲು ಮನವಿ: ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ‘ಶ್ರೀ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ’ಗಳನ್ನು ಸ್ಥಾಪಿಸಬೇಕು. ಈಗಾಗಲೇ ಕಲಬುರಗಿ, ಧಾರವಾಡ ಹಾಗೂ ಹಂಪಿಯಲ್ಲಿ ಸ್ಥಾಪಿಸಲಾಗಿರುವ ಪೀಠಗಳ ಮೂಲಕ ವಾಲ್ಮೀಕಿ ನಾಯಕ ಜನಾಂಗದ ಸಾಂಸ್ಕೃತಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕ ವಿಷಯಗಳ ಬಗ್ಗೆ ಆಳವಾದ ಅಧ್ಯಯನ ನಡೆಸಲು ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಮನವಿ ಪತ್ರದಲ್ಲಿ ಸಲ್ಲಿಸಲಾಗಿದೆ.


Share It

You cannot copy content of this page