ಅಪರಾಧ ಸುದ್ದಿ

ಕಮ್ಮಗೊಂಡನಹಳ್ಳಿಯಲ್ಲಿ ಅಗ್ನಿ ದುರಂತ: ತಡವಾಗಿ ಬೆಳಕಿಗೆ ಬಂದ ಉಸಿರುಗಟ್ಟಿ ದಂಪತಿ ಸಾವಿನ ಘಟನೆ

Share It

ಬೆಂಗಳೂರು: ಗಂಗಮ್ಮನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಮ್ಮಗೊಂಡನಹಳ್ಳಿಯ ಆಟೊ ಮೊಬೈಲ್ಸ್ ಮಳಿಗೆಯೊಂದರಲ್ಲಿ ಕಳೆದ ಶನಿವಾರ ರಾತ್ರಿ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ಉಸಿರುಗಟ್ಟಿ ದಂಪತಿ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆಕಾಶ್ ಹಾಗೂ ನಾಗರತ್ನ ಮೃತ ದಂಪತಿಗಳು. ಕಲಬುರಗಿ ಆಳಂದ ತಾಲೂಕಿನ ನಿವಾಸಿ ಆಕಾಶ್, ನಾಗರತ್ನ ಬೆಳಗಾವಿ ಮುರಗೋಡ್ ತಾಲೂಕಿನವರಾಗಿದ್ದು, ಕೆಲ ವರ್ಷಗಳ ಹಿಂದೆ ವಿವಾಹವಾಗಿತ್ತು. ದಂಪತಿ ಕಮ್ಮಗೊಂಡನಹಳ್ಳಿಯಲ್ಲಿ ವಾಸವಾಗಿದ್ದರು, ಇಂಡಿಯನ್​ ಆಯಿಲ್ ಪೆಟ್ರೋಲ್ ಬಂಕ್​ನಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದರು. ಎಂದಿನಂತೆ ಶನಿವಾರ ರಾತ್ರಿ ಮನೆಯಲ್ಲಿರುವಾಗ ಕಟ್ಟಡದ ನೆಲಮಹಡಿಯಲ್ಲಿ ಆಟೊ ಮೊಬೈಲ್ಸ್ ಮಳಿಗೆಯಲ್ಲಿ ಅಗ್ನಿ ಅನಾಹುತ ಸಂಭವಿಸಿತ್ತು.

ಮೊದಲ ಮಹಡಿಯ ಮನೆಯಲ್ಲಿದ್ದ ದಂಪತಿಗಳು ಹೊರ ಬರಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮನೆಯಲ್ಲಿ ಸಿಲುಕಿಕೊಂಡ ಪರಿಣಾಮ ಬೆಂಕಿಯ ಹೊಗೆಯಿಂದಾಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಇಂದು ಮನೆಯಿಂದ ದುರ್ವಾಸನೆ ಬರುತ್ತಿದ್ದರಿಂದ ಸ್ಥಳೀಯರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ದೌಡಾಯಿಸಿದಾಗ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಘಟನೆ ಕುರಿತು ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ಸದ್ಯ ಇಬ್ಬರ ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದುರ್ಘಟನೆ ಸಂಬಂಧ ನಿರ್ಲಕ್ಷ್ಯದಡಿ ಮಳಿಗೆ ಮಾಲೀಕ ಸಬೀಕ್ ಪಾಷಾ ಹಾಗೂ ಕಟ್ಟಡದ ಮಾಲೀಕ ಹಿನಾಯತ್ ಉಲ್ಲಾ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅಂಗಡಿ ಮಾಲೀಕ ಹಲವು ವರ್ಷಗಳಿಂದ ಆಟೊ ಮೊಬೈಲ್ಸ್ ಗೆ ಬೇಕಾಗುವ ವಸ್ತುಗಳು, ವಿವಿಧ ರೀತಿಯ ಆಯಿಲ್​ಗಳ ಜೊತೆಗೆ ಸಿಲಿಂಡರ್​ಗಳನ್ನ ಮಾರಾಟ ಮಾಡುತ್ತಿದ್ದ. ಶನಿವಾರ ರಾತ್ರಿ 8.30ರ ಏಕಾಏಕಿ ಅಗ್ನಿ ಅನಾಹುತ ಸಂಭವಿಸಿತ್ತು. ಮಾಹಿತಿ ಆಧರಿಸಿ ಪೊಲೀಸರ ಜೊತೆಗೆ ಸ್ಥಳಕ್ಕೆ ಸುಕೊ ತಂಡ ಹಾಗೂ ಅಗ್ನಿಶಾಮಕ ತಂಡವು ಸ್ಥಳಕ್ಕೆ ಬಂದು ಪರಿಶೀಲಿಸಿತ್ತು. ಸಿಲಿಂಡರ್ ಸ್ಫೋಟದಿಂದ ಅನಾಹುತ ಸಂಭವಿಸಿಲ್ಲ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

ಶಾರ್ಟ್ ಸರ್ಕ್ಯೂಟ್​ ಅಥವಾ ಬೇರೆ ಮೂಲದಿಂದ ಬೆಂಕಿ ಕಾಣಿಸಿಕೊಂಡಿದೆಯಾ ಎಂಬುದರ ಬಗ್ಗೆ ಅಗ್ನಿಶಾಮಕ ಇಲಾಖೆ ಹಾಗೂ ಬೆಸ್ಕಾಂನಿಂದ ವರದಿ ಬಂದ ಬಳಿಕ ನಿಯಮನುಸಾರ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ವಾಯುವ್ಯ ವಿಭಾಗ ಡಿಸಿಪಿ ನಾಗೇಶ್ ತಿಳಿಸಿದ್ದಾರೆ. ಅಕ್ಟೋಬರ್ 24ರಂದು ರಾತ್ರಿ 8:30ರ ಸುಮಾರಿಗೆ ಕಮ್ಮಗೊಂಡನಹಳ್ಳಿಯಲ್ಲಿ ಈ ಘಟನೆ ನಡೆದಿತ್ತು. ಅಂದಾಜು 20ಕ್ಕೂ ಹೆಚ್ಚು ಗ್ಯಾಸ್ ಸಿಲಿಂಡರ್‌ಗಳು ಸಾಲು ಸಾಲಾಗಿ ಸ್ಫೋಟಗೊಂಡಿವೆ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಮಾಹಿತಿ ನೀಡಿದ್ದರು.

ಸಣ್ಣ ಅಂಗಡಿಯೊಂದರಲ್ಲಿ ಅಕ್ರಮವಾಗಿ ಗ್ಯಾಸ್ ರಿಫಿಲ್ಲಿಂಗ್ ಕೆಲಸ ನಡೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಒಂದು ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿತ್ತು. ಸೋರಿಕೆಯಾಗುತ್ತಿದ್ದಂತೆಯೇ ಭೀತಿಯಿಂದ ಅಂಗಡಿಯಲ್ಲಿದ್ದ ವ್ಯಕ್ತಿ ತಕ್ಷಣ ಹೊರಗೆ ಓಡಿ ಹೋಗಿದ್ದಾನೆ. ಆದರೆ, ನೋಡನೋಡುತ್ತಿದ್ದಂತೆಯೇ ಬೆಂಕಿ ಆವರಿಸಿ, ಅಂಗಡಿಯಲ್ಲಿದ್ದ ಒಂದಾದ ಮೇಲೊಂದರಂತೆ ಸರಣಿ ಸಿಲಿಂಡರ್‌ಗಳು ಸ್ಫೋಟಗೊಳ್ಳಲು ಪ್ರಾರಂಭಿಸಿವೆ.​

ಈ ಅಂಗಡಿಯಲ್ಲಿ ಕೇವಲ ಗ್ಯಾಸ್ ರಿಫಿಲ್ಲಿಂಗ್ ಮಾತ್ರವಲ್ಲದೆ, ಬೇರೆ ಕಡೆಯಿಂದ ಅಕ್ರಮವಾಗಿ ಪೆಟ್ರೋಲ್ ಹಾಗೂ ಸೀಮೆಎಣ್ಣೆಯನ್ನು ತಂದು ಚಿಲ್ಲರೆಯಾಗಿ ಮಾರಾಟ ಮಾಡಲಾಗುತ್ತಿತ್ತು. ಸಿಲಿಂಡರ್ ಸ್ಫೋಟದಿಂದ ಉಂಟಾದ ಬೆಂಕಿ ಪೆಟ್ರೋಲ್ ಮತ್ತು ಸೀಮೆಎಣ್ಣೆ ಸಂಗ್ರಹಕ್ಕೂ ಆವರಿಸಿದ್ದರಿಂದ ಇಡೀ ಕಟ್ಟಡ ಧಗಧಗನೆ ಉರಿಯತೊಡಗಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.


Share It

You cannot copy content of this page